Thursday, February 5, 2009

ಪ್ರೀತಿ ಅಂದ್ರೆ ಇದೇನಾ...?


ಪ್ರೀತಿ-ಪ್ರೇಮ ಎಂದು ಆರಂಭಗೊಂಡು ೨ ವರ್ಷ ಕಳೆಯುವುದರೊಳಗೆ ವಿಚ್ಚೇದನ ಪಡೆಯುವ ಮಂದಿ ಇರುವ ಈ ಕಾಲದಲ್ಲಿ, ಪತಿಯ ನೆನಪಿಗೋಸ್ಕರ ೬೦ ವರ್ಷಗಳಿಂದ ಹಿಡಿದ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರೆ ಬಹುಷಃ ನಂಬಲಿಕ್ಕಾಗದಿದ್ದರೂ ಇದು ಸತ್ಯ.
ಯಾರಪ್ಪ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದೀರಾ...? ನೂರತ್ತರ ಹರೆಯದಲ್ಲೂ ಬತ್ತದ ಸ್ವಾಭಿಮಾನಿ ವೃದ್ದೆಯೊಬ್ಬರ ಪ್ರೇಮದ ಕಥನ ಇದು!
ಪತಿ ಊರ ಮುಂಭಾಗದಲ್ಲಿರುವ ಒಂದು ಕಟ್ಟೆಯ ಮೇಲೆ ಕುಳಿತಿರುತ್ತಿದ್ದರು, ಯಾವಾಗಲೂ ಅಲ್ಲೇ ಓಡಾಡುತ್ತಿದ್ದರು ಎಂಬ ಕಾರಣಕ್ಕಾಗಿ ಪತಿ ಗತಿಸಿದ ನಂತರ ಅವರ ನೆನಪಿಗಾಗಿ ೬೦ ವರ್ಷಗಳಿಂದ ಅವರು ಕುಳಿತುಕೊಳ್ಳುತ್ತಿದ್ದ, ನಡೆದಾಡುತ್ತಿದ್ದ ಜಾಗವನ್ನು ಪ್ರತಿದಿನ ಸ್ವಚ್ಚವಾಗಿಡುವುದೇ ಈಕೆಯ ಕಾಯಕ!ಈಕೆ ಮಾದಮ್ಮ, ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಹಳ್ಳಿ ಎಂಬ ಗ್ರಾಮದವರು.

ಎಲ್ಲರಿಗೂ ಮಾದರಿಯಾಗುವ ವ್ಯಕ್ತಿತ್ವ, ವಯಸ್ಸು ೧೧೦ರಿಂದ ೧೧೫ ಇರಬಹುದು. ಪತಿ ತಿಮ್ಮಯ್ಯ ಮರಣಹೊಂದಿ ೬೦ ವರ್ಷಗಳು ಕಳೆದಿವೆ. ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಇದ್ದಾರೆ.

ಹುಟ್ಟು ಸ್ವಾಭಿಮಾನಿಯಾದ ಈಕೆ, ಇದುವರೆಗೂ ಯಾರಿಂದಲೂ ತನ್ನ ಕೆಲಸವನ್ನು ಮಾಡಿಸಿಕೊಂಡಿಲ್ಲ. ಇದರಲ್ಲೇನು ವಿಶೇಷ ಎಂದೀರಾ? ಕೇವಲ ಪತಿಯ ಮೇಲಿನ ಪ್ರೀತಿಗೋಸ್ಕರ ಈಕೆ ತನ್ನ ಕಾಯಕವನ್ನು ಪ್ರತಿದಿನ ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.

ಪ್ರತಿದಿನ ಈ ಕೆಲಸ ಮಾಡದೇ ಇದ್ದರೆ ಈಕೆಗೆ ಗಂಟಲಲ್ಲಿ ನೀರೂ ಇಳಿಯುವುದಿಲ್ಲ! ಗಂಡ ಕುಳಿತುಕೊಳ್ಳುವಾಗ ಸ್ವಚ್ಚವಾಗಿರಲಿ ಎಂದು ಆರಂಭಗೊಂಡ ಈ ಕಾಯಕ ಗಂಡನ ಮರಣಾನಂತರವೂ ಮುಂದುವರೆಸುತ್ತಿದ್ದೇನೆ ಎನ್ನುತ್ತಾರೆ ಈ ಅಜ್ಜಿ!ಈ ಕಾಯಕವನ್ನು ಮಾಡಲು ಬೇರೆಯವರಿಗೆ ಅವಕಾಶ ನೀಡದ ಈ ಅಜ್ಜಿ, ಸ್ವಚ್ಚ ಮಾಡಲು ಉಪಯೋಗಿಸುವ ಪೊರಕೆಯನ್ನೂ ಸಹ ಬೇರೆಯವರಿಂದ ಪಡೆಯುವುದಿಲ್ಲವಂತೆ!

ಮನೆಯಲ್ಲಿ ನೋಡಿಕೊಳ್ಳುವವರು ಎಲ್ಲಾ ಇದ್ದರೂ, ತನ್ನ ದಿನನಿತ್ಯದ ಕಾಯಕವನ್ನು ತಾನೇ ಮಾಡಿಕೊಳ್ಳುವ ಈಕೆಯ ಉತ್ಸಾಹ ಇನ್ನೂ ಬತ್ತಿಲ್ಲ. ಜನಗಳ ಪ್ರೀತಿಗೆ ಪಾತ್ರವಾಗಿರುವ ಈಕೆಯನ್ನು, ಪಕ್ಕದ ಗ್ರಾಮದ ಜನರೂ ಎಲ್ಲರ ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ.

ಇನ್ನೊಂದು ವಿಶೇಷವೇನೆಂದರೆ ಪರರ ಹಣ ಈಕೆಗೆ ಪಾಶಕ್ಕೆ ಸಮ! ತನ್ನ ಕಣ್ಣೆದುರಿಗೇ ದುಡ್ಡು ಬಿದ್ದಿದ್ದರೂ ಈಕೆ ತೆಗೆದುಕೊಳ್ಳುವುದಿಲ್ಲ!ಬೇಕೆಂದು ಕೆಲವರು ಈಕೆಯ ಮುಂದೆ ದುಡ್ಡು ಇಟ್ಟರೂ ಈಕೆ ಕಣ್ಣೆತ್ತಿಯೂ ಸಹ ಅದನ್ನು ನೋಡುವುದಿಲ್ಲವಂತೆ. ಇಂಥಹವರೂ ಇದ್ದಾರೆಯೇ!

೧೧೦ ವರ್ಷಗಳಾದರೂ ಈಕೆ ಇದುವರೆಗೂ ಯಾವ ಖಾಯಿಲೆಯಿಂದಲೂ ಬಳಲಿಲ್ಲ ಎಂದರೆ ನಂಬುತ್ತೀರಾ? ಸರಳ ಜೀವನ, ಮಿತ ಆಹಾರ, ಆರೋಗ್ಯಕರ ಜೀವನ ಈಕೆಯ ದೀರ್ಘಾಯಸ್ಸಿನ ಗುಟ್ಟು!ಒಂಟಿ ಜೀವನ ನಡೆಸುತ್ತಿರುವ ಈಕೆಯ ಬದುಕು ಅಂತ್ಯಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಆದರೂ ಈಕೆಗೆ ತನ್ನ ಗಂಡನ ಮೇಲಿನ ಪ್ರೀತಿ ಬತ್ತಿಲ್ಲ ಎಂದು ಕಾಣುತ್ತಿದೆ.

ಪ್ರೀತಿ ಅಂದ್ರೆ ಇದೇನಾ....?

ಆಟ ಮುಗಿಸಿದ 'ಕೆರೆಮನೆ’




ಯಕ್ಷಗಾನ ರಂಗದ ಸುಖ-ದುಃಖ ಮತ್ತು ಏರಿಳಿತಗಳನ್ನು ಬಾಲ್ಯದಿಂದಲೇ ಅನುಭವಿಸಿಕೊಂಡು, ಪೋಷಿಸಿಕೊಂಡು ಬಂದ ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡಮಿ ಅಧ್ಯಕ್ಷರೂ ಆದ ಕೆರೆಮನೆ ಶಂಭುಹೆಗ್ಗಡೆ ಎಂಬ ಮಹಾನ್ ಚೇತನ ಇನ್ನು ಇತಿಹಾಸದ ಪುಟಗಳಲ್ಲಿ ಮಾತ್ರ!

ಕೇರಳದಲ್ಲಿ ಕಥಕ್ಕಳಿ ನಾಡಿನ ಸಾಂಸ್ಕೃತಿಕ ರಂಗದ ಮಾನ್ಯತೆ ಪಡೆದಿದೆಯೋ ಹಾಗೆಯೇ ಯಕ್ಷಗಾನ ಕರ್ನಾಟಕದಲ್ಲಿ ಅಗ್ರಪಂಕ್ತಿಯ ಕಲೆಯಾಗಿ ಮಾನ್ಯತೆ ಪಡೆಯಬೇಕಾದ ಅಗತ್ಯವಿದೆ ಎಂಬ ತಮ್ಮ ಮಹದಾಸೆಯನ್ನು ಇಟ್ಟುಕೊಂಡಿದ್ದ ಹೆಗಡೆಯವರು, ಅನುಷ್ಟಾನಕ್ಕಾಗಿ ಬಹಳಷ್ಟು ಶ್ರಮಿಸಿದರೂ ಕಡೆಗೂ ಅವರ ಆಸೆ ಈಡೇರಲಿಲ್ಲ.

ಔದ್ಯೋಗಿಕತೆಗೆ ಸಿಕ್ಕಿ ಜಾನಪದ ಕಲಾಪ್ರಕಾರಗಳು ನಾಶವಾಗುತ್ತಿದ್ದು, ಜಾನಪದ ಕಲಾಪ್ರಕಾರಗಳನ್ನು ಉಳಿಸುವ ಕೆಲಸವನ್ನು ಕಲಾವಿದರು, ಪ್ರೇಕ್ಷಕರು ಮಾಡಬೇಕು. ಯಕ್ಷಗಾನ ಕ್ಷೇತ್ರಕ್ಕೆ ತಮ್ಮಿಂದ ಒಳ್ಳೆಯದಾಗಿದೆಯೋ ಇಲ್ಲವೋ, ಕೆಟ್ಟದಂತೂ ಆಗಬಾರದು ಎನ್ನುವ ಕಳಿಕಳಿ ಹೊಂದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಹಾಗೂ ರಂಗಭೂಮಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತಿದ್ದರು.

ಯಕ್ಷಗಾನ ಕಲೆ, ಪೋಷಣೆ ಹಾಗೂ ಅಭಿವೃದ್ದಿಗೆ ಆದ್ಯತೆ ನೀಡಲು ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾಗಬೇಕೆನ್ನುತ್ತಿದ್ದ ಅವರು, ಜಾನಪದ ಕ್ಷೇತ್ರವು ಅತ್ಯಂತ ವಿಸ್ತಾರವಾಗಿರುವುದರಿಂದ ಒಂದೇ ಅಕಾಡೆಮಿಯಿಂದ ಎರಡು ಸಂಗತಿಗಳಿಗೂ ನ್ಯಾಯ ಸಿಗಲಾರದು ಎಂಬ ಅಭಿಪ್ರಾಯ ಹೊಂದಿದ್ದರು.

ಯಕ್ಷಗಾನ ಕಲಾಕೇಂದ್ರ ಸ್ಥಾಪಿಸಿ, ಸಂಚಾರಿ ಮೇಳ ರೂಪಿಸಿ ಕಲೆಯ ಋಣ ತೀರಿಸುತ್ತಾ, ರಕ್ಷಣೆಯ ಕೆಲಸವನ್ನು ಮಾಡಿಕೊಂಡು ಬಂದಿದ್ದ ಕೆರೆಮನೆ ಶಂಭುಹೆಗ್ಗಡೆಯವರು, ತಮ್ಮ ಪುತ್ರ ಶಿವಾನಂದ ಹೆಗಡೆಯವರನ್ನು ಸಹ ಈ ಕ್ಷೇತ್ರಕ್ಕೆ ಕರೆತಂದು, ತಮ್ಮ ಮುಂದಿನ ಪೀಳಿಗೆಯೂ ಸಹ ಯಕ್ಷಗಾನ ಕಲೆಯನ್ನು ಮುಂದುವರಿಸುವ ಜವಾಬ್ದಾರಿಯನ್ನು ಹೊರಿಸಿದ್ದಾರೆ.

ತಮ್ಮ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಎಲ್ಲರನ್ನೂ ಕಲಾವಿರನ್ನಾಗಿ ರೂಪಿಸಿದ ಶಂಭುಹೆಗ್ಗಡೆಯವರು, ತಮ್ಮ ಇಳಿ ವಯಸ್ಸಿನಲ್ಲೂ ತಮ್ಮ ಕಲಾ ಪ್ರೇಮ ಬಿಟ್ಟಿರಲಿಲ್ಲ.

ಒಂದು ಕಾಲದಲ್ಲಿ ಅನಕ್ಷರಸ್ತ ಸಮುದಾಯವನ್ನು ಕಲೆಯ ಮೂಲಕ ಪೌರಾಣಿಕ ಕಥೆಗಳನ್ನು ತಲುಪಿಸಿದ ಸಾಧನೆಯನ್ನು ಯಕ್ಷಗಾನ ಕಲಾವಿದರು ಮಾಡಿದ್ದಾರೆ. ಯಕ್ಷಗಾನದಲ್ಲಿ ಮಾತು, ಅಭಿನಯಕ್ಕೆ ಪ್ರಾಮುಖ್ಯತೆ ಇದೆ. ಇಲ್ಲಿ ಒಂದು ಪಾತ್ರಕ್ಕೆ ವೈಚಾರಿಕ ನೆಲೆಗಟ್ಟನ್ನು ಒದಗಿಸಿಕೊಟ್ಟವರು ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಕಲಾವಿದರು, ಅವರ ಪ್ರಭಾವ ಉಳಿದ ವೇಷಧಾರಿಗಳ ಮೇಲೂ ಇದೆ ಎಂದು ಹೆಗಡೆ ಅಭಿಪ್ರಾಯಿಸುತ್ತಿದ್ದರು.

ಜಾನಪದ ಕಲೆ ಹಾಗೂ ಸಾಹಿತ್ಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪದವಿ ಮಟ್ಟದ ಪಠ್ಯದಲ್ಲೂ ಈ ವಿಷಯವನ್ನು ಸೇರ್ಪಡೆ ಮಾಡಬೇಕು ಎಂದು ಸರ್ಕಾರಕ್ಕೂ ಸಲಹೆ ಮಾಡಿದ್ದರು.ಅಗಲಿದ ಈ ಮಹಾನ್ ಚೇತನಕ್ಕೆ ಅನೇಕ ಪುರಸ್ಕಾರಗಳು, ಪ್ರಶಸ್ತಿಗಳು ಸಂದಿದ್ದು, ಸನ್ಮಾನಗಳಿಗಂತೂ ಲೆಕ್ಕವೇ ಇರಲಿಲ್ಲ.

ಯಕ್ಷಗಾನದಲ್ಲಿ ಆಸಕ್ತಿ ಇರುವ ಕಲಾವಿದರಿಗಾಗಿ ಜಿ.ಎಸ್. ಭಟ್ ಅವರು ಕೆರೆಮನೆ ಶಂಭುಹೆಗ್ಗಡೆ ಅಧ್ಯಯನ ಗ್ರಂಥವನ್ನೂ ಸಹ ರಚಿಸಿದ್ದಾರೆ. ಇದರಲ್ಲಿ ಹೆಗ್ಡೆಯವರ ಯಕ್ಷಗಾನ ಲೋಕದ ಸಾಧನೆಯನ್ನು ಬಣ್ಣಿಸಲಾಗಿದೆ.

ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಇದನ್ನು ಮಹತ್ವದ ಕಲಾ ಪರಂಪರೆ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆಟ ನೋಡುವುದಿಲ್ಲ ಏಕೆ? ಎನ್ನುತ್ತಿದ್ದ ಹೆಗಡೆಯವರು, ಯಕ್ಷಗಾನ ಕಲಾಪ್ರಕಾರಕ್ಕೆ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದರು.

ಒಟ್ಟಾರೆ ಒಬ್ಬ ಮಹಾನ್ ಯಕ್ಷಗಾನ, ರಂಗಭೂಮಿ ಕಲಾವಿದರೊಬ್ಬರನ್ನು ನಮ್ಮ ಸಾಂಸ್ಕೃತಿಕ ನಾಡು ಕಳೆದುಕೊಂಡಿದೆ. ಇದನ್ನು ಉಳಿಸಲು, ಬೆಳೆಸಲು ಮತ್ತೊಬ್ಬ ಶಂಭುಹೆಗ್ಗಡೆ ಹುಟ್ಟಿ ಬರುವರೇ? ಕಾದುನೋಡಬೇಕಾಗಿದೆ.

ಅಗಲಿದ ಚೇತನಕ್ಕೆ ನಮನ ಸಲ್ಲಿಸುತ್ತಾ, ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.

Friday, January 23, 2009

18ನೇ ಶತಮಾನಕ್ಕೆ ಹೋಗಬೇಕೆ!? ಹಾಗಾದ್ರೆ ಬನ್ನಿ

KALLINA RATHA
ಇಂದಿನ ಬೆಂಗಳೂರಿನ ಆ ವಾಯುಮಾಲಿನ್ಯದಿಂದಾಗಿ, ಆ ವಾಹನಗಳ ಶಬ್ದಗಳ ಕಿರಿಕಿರಿಯಿಂದಾಗಿ ಬೇಸತ್ತಿದ್ದೀರಾ?ಬೆಂಗಳೂರು ಎಂಬ ಮಾಯೆಯ ಮಹಾನಗರಿಯನ್ನು ಬಿಟ್ಟು, ಸ್ವಲ್ಪ ಸಮಯ ರಿಲ್ಯಾಕ್ಸ ಪಡೆದು, ೧೮ನೇ ಶತಮಾನಕ್ಕೆ ಹೋಗೋಣ ಬನ್ನಿ...!

ಬೆಂಗಳೂರಿನಿಂದ ಮೈಸೂರು ಕಡೆಗೆ ಕೇವಲ ೪೫ ಕಿ.ಮೀ.ಯಲ್ಲಿ ನಿಮಗೆ ಸಿಗುತ್ತದೆ ೧೮ನೇ ಶತಮಾನದ ಚಿತ್ರಣ! ನಿಜ ಕಣ್ರೀ... ಹೆದ್ದಾರಿಯಲ್ಲೇ ಜಾನಪದ ಲೋಕ ಎಂಬ ಒಂದು ಪ್ರಾಚೀನ ಇತಿಹಾಸವನ್ನು ನೆನಪಿಸುವ ಒಂದು ತಾಣ ಇದೆ.

ದಿನನಿತ್ಯದ ಜಂಜಾಟವನ್ನೆಲ್ಲಾ ಮರೆತು, ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಒಂದು ಸಲ ಇಲ್ಲಿಗೆ ಬರಲೇ ಬೇಕು ಕಣ್ರೀ. ಇಲ್ಲಿ ಅಂಥದ್ದೇನಿದೆ ಅಂತೀರಾ...?

ನಿಮ್ಮ ಊಹೆಗೂ ನಿಲುಕದಷ್ಟು ಸಂಗತಿಗಳು ಇಲ್ಲಿ ಸಿಗುತ್ತವೆ. ಹೆಬ್ಬಾಗಿಲಿನಲ್ಲೇ ನಿಮಗೆ ನಮ್ಮ ಪ್ರಾಚೀನ ಗತಕಾಲದ ನೆನಪಾಗುತ್ತದೆ.ಒಳಗೆ ಪ್ರವೇಶ ಮಾಡುತ್ತಿದ್ದಂತೆ ಗಾದೆಗಳ ಬರವಣಿಗೆ ನಿಮ್ಮನ್ನು ಸ್ವಾಗತಿಸುತ್ತವೆ.

ಮುಂದಡಿ ಇಡುತ್ತಿದ್ದಂತೆ ನಿಮಗೆ ೧೮ನೇ ಶತಮಾನದ ಅನುಭವ ಆಗಲು ನಿಮಗೆ ಸಾಕಷ್ಟು ಸಮಯ ಬೇಕಾಗುವುದಿಲ್ಲ ಅನಿಸುತ್ತದೆ.

ಮಾರ್ಗದುದ್ದಕ್ಕೂ ತೆಂಗಿನ ಮರಗಳ ಸಾಲು, ಪಕ್ಕದಲ್ಲೇ ಉದ್ಯಾನ, ಅಲ್ಲಲ್ಲಿ ಓಡಾಡುವ ಬಾತುಕೋಳಿಗಳು, ಮರದ ಮೇಲಿಂದಲೇ ನಿಮ್ಮನ್ನು ಸ್ವಾಗತಿಸುವ ವಾನರ ಗುಂಪು, ಆ ಪಕ್ಷಿಗಳ ಚಿಲಿಪಿಲಿ ಕಲರವ, ನಿಜಕ್ಕೂ ಇಂಥಾ ಒಂದು ಅದ್ಭುತ ಲೋಕ ಇನ್ನೂ ಉಳಿದಿದೆಯೇ ಎಂದು ನಿಮಗೆ ಅನ್ನಿಸದೇ ಇರದು!

ಗತಕಾಲದ ಇತಿಹಾಸ ಸಾರುವ ಪಳೆಯುಳಿಕೆಗಳು, ವಸ್ತುಗಳು, ದೇವಾಲಯಗಳು, ಉದ್ಯಾನವನಗಳು, ಕಲಾಕೃತಿಗಳು, ಹಳೆಯ ರಥಗಳು, ಗ್ರಂಥಗಳು, ಲೋಕಮಹಲ್, ವಸ್ತು ಸಂಗ್ರಹಾಲಯ, ಗಿಡ ಮೂಲಿಕೆಗಳು, ಹಂಸವಿಹಾರ, ಕೆರೆ, ಕಾಡು ಹೀಗೆ ಎಲ್ಲಾ ಇಲ್ಲಿ ಕಾಣಸಿಗುತ್ತವೆ.

ಮುಖ್ಯವಾಗಿ ಕ್ರಿ.ಶ.೧೧೫೦ ವರ್ಷಗಳದ್ದು ಎನ್ನಲಾದ ವಿಗ್ರಹಗಳು, ಶಿಲಾಶಾಸನಗಳು, ವೀರಗಲ್ಲು, ಮಾಸ್ತಿಕಲ್ಲುಗಳು, ೧೪-೧೫ನೇ ಶತಮಾನದ ಕಲ್ಲಿನಿಂದ ಕೆತ್ತಲ್ಪಟ್ಟಿರುವ ದೇವರ ವಿಗ್ರಹಗಳು ಇಲ್ಲಿನ ಆಕರ್ಷಣೀಯವಾಗಿವೆ.

ಒಳಗೆ ಹೋದರೆ ನಿಮಗೆ ಅಲ್ಲಿಂದ ಬರಲು ಮನಸೇ ಆಗುವುದಿಲ್ಲ ಎಂಬ ಅನಿಸಿಕೆ ನನ್ನದು.ಬರೆಯಲು ಸಾದ್ಯವಾಗದಷ್ಟು ವಿಸ್ಮಯಗಳು ಇಲ್ಲಿವೆ. ವಿಹರಿಸಿ, ಸಕಾದಾಗ ಅಲ್ಲಿ ಕೂಲಾಗಿ ಕುಳಿತು, ಊಟ ಮಾಡಲು ಪ್ರಸಿದ್ದ ಕಾಮತ್ ಲೋಕರುಚಿ ಭೋಜನಶಾಲೆಯೂ ಸಹ ಇದೆ.

ಬನ್ನಿ ಸ್ವಲ್ಪ ಸಮಯ ನಮ್ಮ ಜಾಗವನ್ನು ಬಿಟ್ಟು ಜಾನಪದ ಲೋಕಕ್ಕೆ ಹೋಗಿ ಬರೋಣ. ನಮ್ಮ್ ಮನವನ್ನು ಸಂತೋಷಪಡಿಸೋಣ. ಬರ್ತೀರಿ ತಾನೆ?

ಇಷ್ಟಾರ್ಥ ಈಡೇರಿಸುವ ಬಸವ!


ನೀವು ನೆನೆದುಕೊಂಡಂತೆ ಆಗಬೇಕೆ?, ನಿಮಗೆ ಪ್ರೊಮೋಷನ್ ಬೇಕೆ?, ಕುಟುಂಬದಲ್ಲಿ ಶಾಂತಿ ನೆಲೆಸಬೇಕೆ?, ನಿಮ್ಮ ತೊಂದರೆ ಪರಿಹಾರವಾಗಬೇಕೆ?, ಸಂತಾನಭಾಗ್ಯ ಬೇಕೆ?, ನಿಮ್ಮ ಎಲ್ಲಾ ದೋಷ ಕಳೆಯಬೇಕೆ?...ಹಾಗಾದ್ರೆ ಯಾಕೆ ತಡ? ಬನ್ನಿ ನಮ್ಮ ಬಸವನ ಬಳಿಗೆ...!!!ಎಲ್ಲಿದೆ ಅಂತ ಕೇಳ್ತಾಇದೀರಾ? ಮಾಯಾನಗರಿಯೆಂಬ ಬೆಂಗಳೂರಿನಿಂದ ಕೆಲವೇ ಕಿ.ಮೀ.ಗಳ ದೂರದಲ್ಲೇ ಇದೆ ಈ ಬಸವನ ವಾಸ್ತವ್ಯ. ಕಲಿಯುಗದ ನಿಜದೇವರು ಎಂದೇ ಬಿಂಬಿತವಾಗಿರುವ ಈ ಬಸವ ಮಂಡ್ಯ ಜಿಲ್ಲೆಯಲ್ಲಿದೆ.ಆಶ್ಚರ್ಯ ಆದರೂ ನಿಜ ಕಣ್ರೀ. ನಿಮ್ಮ ಎಲ್ಲಾ ಕೋರಿಕೆಗಳನ್ನೂ ಈಡೇರಿಸಲು ಈ ಬಸವನ ಜನನ ಆಗಿದೆ ಎಂದೇ ಹೇಳುತ್ತಾರೆ ಈ ಭಾಗದ ಜನ! ಅದು ನಿಜವೂ ಕೂಡಾ.ಹಾಗಾದ್ರೆ ಬನ್ನಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮಕ್ಕೆ. ಚಿಕ್ಕರಸಿನಕೆರೆಯ ಶ್ರೀ ಕಾಲಭ್ಯರವೇಶ್ವರನ ದೇವಾಲಯಕ್ಕೆ. ಇಲ್ಲೇ ಇರುವುದು ಈ ಬಸವ.ಜಗತ್ತಿನಲ್ಲಿ ನಾನಾ ವಿಸ್ಮಯಗಳನ್ನು ಸೃಷ್ಟಿಸುತ್ತಿರುವ ಮಾನವನಿಂದ ಅಸಾಧ್ಯವಾದ ಕೆಲಸವನ್ನು ಸಾಮಾನ್ಯವಾದ ದನ(ಹಸು) ಮಾಡುತ್ತದೆಯೇ ಎಂದು ಯೋಚಿಸಬೇಡಿ. ಈ ಬಸವ ಎಲ್ಲಾ ದನಗಳ ಹಾಗಲ್ಲ, ಇದಕ್ಕೆ ತನ್ನದೇ ಆದ ಕೆಲವು ವಿಶಿಷ್ಟತೆಗಳು, ಆಚರಣೆಗಳು ಇವೆ.ಈ ಬಸವನ ದರ್ಶನ ಭಾಗ್ಯ ದೊರೆಯುವುದೇ ಪುಣ್ಯ ಕಣ್ರೀ. ಆ ದೇವಾಲಯದ ಬಳಿ ಈ ಬಸವನನ್ನು ನೋಡಲು ಇಡೀ ರಾಜ್ಯದಿಂದಷ್ಟೇ ಅಲ್ಲ, ದೇಶ, ವಿದೇಶಗಳಿಂದಲೂ ಸಹ ಭಕ್ತರು ಆಗಮಿಸುತ್ತಾರೆ.ಇಡೀ ಮಂಡ್ಯ ಜಿಲ್ಲೆಯ ಜನತೆ ಈ ಬಸವನನ್ನು ತಮ್ಮ ಮನೆದೇವರನ್ನಾಗಿ ಮಾಡಿಕೊಂಡಿದ್ದಾರೆ. ಹಾಗೆಯೇ ಈ ಬಸವನೂ ಸಹ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾನೆ. ಈ ಬಸವ ದೇವರ ತದ್ರೂಪು ಎಂದೇ ಜನ ಭಾವಿಸಿ, ಇದನ್ನೇ ನಂಬಿದ್ದಾರೆ. ತಮ್ಮ ಯಾವುದೇ ಕೆಲಸಗಳನ್ನು ಪ್ರಾರಂಭಿಸಲು, ಕಷ್ಟ ನಿವಾರಿಸಿಕೊಳ್ಳಲು ಈ ಬಸವನ ಬಳಿಗೆ ಬರುವ ಜನ, ಹಿಂತಿರುಗಿ ಹೋಗುವಾಗ ನಿರಾಸೆಯಿಂದ ಹೋಗುವುದನ್ನು ಯಾರೂ ಕಂಡಿಲ್ಲವಂತೆ.ಸುಮಾರು ೩೦ ವರ್ಷಗಳಿಂದ ಈ ಬಸವ ಇಲ್ಲಿಯ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದು, ಈ ಬಸವ ಇರುವ ಈ ತಾಣದಲ್ಲಿ ಇಲ್ಲಿಯವರೆಗೂ ಬರಗಾಲವೇ ಬಂದಿಲ್ಲವಂತೆ! ಸುಂದರ ಪ್ರಕೃತಿಯ ಮಡಿಲಿನಲ್ಲಿ, ಮಲೆನಾಡನ್ನೇ ನಾಚಿಸುವಂತೆ ಇಡೀ ಜಿಲ್ಲೆಯನ್ನೇ ಸಂಪದ್ಭರಿತವಾಗಿ ಇಟ್ಟಿರುವ, ಜನರನ್ನು ಕಾಯುತ್ತಿರುವ ಈ ಬಸವ ಈ ಭಾಗದ ಜನರಿಗೆ ಸುಪ್ರೀಮ್ ಕೋರ್ಟ್ ಆಗಿರುವುದು ವಿಶೇಷ.ಈ ಭಾಗದಲ್ಲಿ ಎಲ್ಲಾದರೂ ಕಳ್ಳತನ, ದರೋಡೆ ಮುಂತಾದವುಗಳು ನಡೆದರೆ, ಕಳ್ಳರನ್ನು ಹಿಡಿಯುವ ಕೆಲಸ ಬಸವನದಂತೆ! ಆ ಕಳ್ಳ ಯಾವುದೇ ಗವಿಯಲ್ಲಿ ಅವಿತಿರಲಿ, ಅವನನ್ನು ಶಿಕ್ಷಿಸುವುದು ಬಸವನ ಕೆಲಸ! ಹಾಗಾಗಿ ಈ ಭಾಗದಲ್ಲಿ ಬಸವನಿಗೆ ಹೆದರಿ ಕಳ್ಳರು ಕಾಲ್ಕಿತ್ತಿದ್ದಾರಂತೆ!ಹಾಗೆಯೇ ಈ ಬಸವ ಸುಮ್ಮನೆ ಬಿಟ್ಟಿ ಕೆಲಸ ಮಾಡಿಕೊಡುವುದಿಲ್ಲ! ಅದಕ್ಕೆ ದಕ್ಷಿಣೆಯನ್ನು ಕೊಡಲೇಬೇಕು. ಇಲ್ಲದಿದ್ದರೆ ನಿಮ್ಮ ಕೆಲಸ ಪೆಂಡಿಂಗ್. ಮೋಸ ಮಾಡುವುದು ಇಲ್ಲಿ ನಡೆಯುವುದಿಲ್ಲ. ಮೋಸಗಾರರ ಬಗ್ಗೆ ಇದಕ್ಕೆ ಮೊದಲೇ ಮಾಹಿತಿ ಸಿಕ್ಕಿರುತ್ತದೆ ಹುಷಾರ್!ಹಾಗಾಗಿ ನಿಮ್ಮ ಕೆಲಸಕ್ಕೆ ತಕ್ಕಂತೆ ದಕ್ಷಿಣೆ ನೀಡಲೇಬೇಕು. ಇಂತಿಷ್ಟು ಅಂತಲ್ಲ, ಕಡಿಮೆಯನ್ನೂ ತೆಗೆದುಕೊಳ್ಳುವುದಿಲ್ಲ. ಕೊಡದಿದ್ದರೆ ನಿಮ್ಮ ಮನೆಗೇ ಬಂದೀತು ಜೋಕೆ! ನೀವು ಕೊಡುವವರೆಗೂ ನಿಮ್ಮ ಮನೆ ಬಿಟ್ಟು ಜಗ್ಗುವುದಿಲ್ಲ.ಯಾರೇ ಆಗಲಿ, ಈ ಬಸವನ ಮುಂದೆ ಎಲ್ಲರೂ ಒಂದೆ. ಎಲ್ಲರಿಗೂ ಒಂದೇ ದರ್ಶನ. ಬಡವರಿಗಾಗಲೀ, ಶ್ರೀಮಂತರಿಗಾಗಲೀ, ದೇಶದ ಪ್ರಧಾನಮಂತ್ರಿಗಾಗಲೀ ಯಾರೇ ಬಂದರೂ ಅದಕ್ಕಾಗಿ ಕಾಯಲೇಬೇಕು... ಇದು ಇದರ ನಿಯಮ!ಒಟ್ಟಿನಲ್ಲಿ ಬಸವ ಜನರನ್ನು ಕಾಪಾಡುತ್ತಿರುವುದಂತೂ ಸತ್ಯ. ಒಮ್ಮೆ ಈ ಬಸವನ ದೇವಾಲಯಕ್ಕೆ ಹೋಗಿ ಬಂದಾಗಲೇ ಇದರ ಮಹತ್ವ ತಿಳಿಯುವುದು. ಹಾಗಾಗಿ ಒಮ್ಮೆ ನಿಮ್ಮ ಕಷ್ಟ ಹೇಳಿಕೊಳೋಕೆ ಹೋಗ್ತೀರಿ ತಾನೇ?

ಬರಿದಾದ ನದಿ-ಕೆರೆ, ಮಳೆರಾಯನಿಗೆ ಕೇಳಿಸದೇ ಮೊರೆ?


ಅದೊಂದು ದೊಡ್ಡಕೆರೆ, ಸುಮಾರು ೧೦ ಸಾವಿರ ಎಕರೆ ಪ್ರದೇಶದಲ್ಲಿ ತನ್ನನ್ನು ಆವರಿಸಿಕೊಂಡಿದೆ. ಸುತ್ತಲೂ ದೊಡ್ಡ ಏರಿ, ಅಲ್ಲಲ್ಲಿ ನೀರು ಹೊರಹೋಗಲು ನಿರ್ಮಿಸಿರುವ ತೂಬುಗಳು, ಕಣ್ಣಾಯಿಸಿದಷ್ಟೂ ದೂರ ಕಾಣುವ ನೀರು, ಅದೆಷ್ಟೋ ದೂರದಲ್ಲಿ ಚಿಕ್ಕದಾಗಿ ಕಾಣುವ ಕೆರೆಯ ದಡ, ಅಲ್ಲೇ ಸಾಲುಗಟ್ಟಿ ನಿಂತಿರುವ ತೆಂಗಿನಮರಗಳು, ಹಿಂದೆಯೇ ಚಿಕ್ಕದಾಗಿ ಕಾಣುವ ದೊಡ್ಡ ದೊಡ್ಡ ಬೆಟ್ಟ-ಗುಡ್ಡಗಳು, ಆಗಸ ಇಲ್ಲೇ ಎಲ್ಲೋ ಹತ್ತಿರದಲ್ಲಿ ಕೊನೆಯಾಗಿದೆಯೇನೋ ಎನ್ನುವ ಅನುಭವ!

ಎಷ್ಟೊಂದು ಸುಂದರ, ವರ್ಣಿಸಲಸಾಧ್ಯ ಅಲ್ಲ್ಲವೇ? ಒಮ್ಮೆ ನಮ್ಮ ಕ್ಯಾಮರಾದೊಳಗೆ ಸೆರೆಸಿಕ್ಕಿಸಿಕೊಳ್ಳೋಣ ಎಂದುಕೊಂಡರೆ ನೀವು ೧೦ ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ ಜೋಕೆ!ನಿಜ, ಅದೇ ದೊಡ್ಡಕೆರೆ ಇಂದು ನೀರಿಲ್ಲದೆ ಸೊರಗಿದೆ, ಹೂಳುತುಂಬಿಕೊಂಡು, ಕೆರೆಯೆಲ್ಲಾ ನುಂಗಣ್ಣರ ಹಾವಳಿಗೆ ತುತ್ತಾಗಿ ಬೇಸಾಯ ಭೂಮಿಯಾಗಿ ಮಾರ್ಪಾಟಾಗಿದೆ, ಕೆರೆ ಕೇವಲ ಕೆಲವೇ ಎಕರೆ ಪ್ರದೇಶವನ್ನು ತನ್ನದಾಗಿಸಿಕೊಂಡಿದೆ, ದಡದಲ್ಲಿ ಕಾಣುತ್ತಿದ್ದ ತೆಂಗಿನಮರಗಳು, ಬೆಟ್ಟಗುಡ್ಡಗಳು ಪಕ್ಕದಲ್ಲಿಯೇ ಇದೆಯಲ್ಲಾ ಎನ್ನುವಂತೆ ಭಾಸ! ಇದು ವಾಸ್ತವ.

ಬೆಳಗಾದೊಡನೆ ತನ್ನಿರುವಿಕೆಯ ಬಳಿ ಈಜಾಡಲು ಆಗಮಿಸುತ್ತಿದ್ದ ಹಳ್ಳಿಯ ಮಕ್ಕಳು, ಪಾತ್ರೆ-ಬಟ್ಟೆ ತೊಳೆಯಲು ಆಗಮಿಸುತ್ತಿದ್ದ ಹೆಂಗೆಳೆಯರು, ದನ-ಕರುಗಳನ್ನು ಸ್ವಚ್ಚಗೊಳಿಸಲು ಬರುತ್ತಿದ್ದ ಜನ, ತನ್ನ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶಕ್ಕೆ ಬೇಸಾಯಕ್ಕೆ ನೀರುಣಿಸುವ ಸಲುವಾಗಿ ಆಗಮಿಸುತ್ತಿದ್ದ ರೈತಾಪಿ ವರ್ಗ ಇವೆಲ್ಲಾ ನೆನಪುಗಳಲ್ಲಿ ಕಾಲಕಳೆಯುತ್ತಾ, ದಶಕಗಳ ಹಿಂದೆ ಪಕ್ಕದಲ್ಲಿಯೇ ಇದ್ದ ಹತ್ತಾರು ಹಳ್ಳಿಗಳ ಮಣ್ಣಿನಮಕ್ಕಳ ಹಿತ ಕಾದಿದ್ದ, ದಿನನಿತ್ಯದ ಬದುಕಿಗೆ ಆಸರೆಯಾಗಿದ್ದ ಕೆರೆ ಇಂದು ಮೂಕರೋಧನೆ ಅನುಭವಿಸುತ್ತಿದೆ.

ಬೇಸಾಯವನ್ನು ಬಿಟ್ಟು ಸೂರ್ಯ ಕಣ್ಣು ಬಿಡುವ ಮೊದಲೇ ತಮ್ಮ ಕೆಲಸ-ಕಾರ್ಯಗಳಿಗಾಗಿ ಪಟ್ಟಣದ ಕಡೆ ಧಾವಿಸುವ ಜನ, ಕೆರೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಮನೆಯ ಬಳಿಯೇ ತಮ್ಮ ದಿನನಿತ್ಯದ ಕಾಯಕದಲ್ಲಿ ತೊಡಗುವ ಹೆಂಗೆಳೆಯರು, ಈಜಾಡುವುದನ್ನೇ ಮರೆತ ಮಕ್ಕಳು...

ವಿಪರ್ಯಾಸ ಅಲ್ಲವೇ? ಕಾಲ ಮುಂದಕ್ಕೆ ಹೋದಂತೆ ಅನೇಕ ಬದಲಾವಣೆಗಳಾಗುತ್ತಿವೆ, ಜಗತ್ತು ಅಭಿವೃದ್ದಿಪಥದತ್ತ ಸಾಗುತ್ತಿದೆ ನಿಜ, ಆದರೆ ಈ ಪ್ರಕೃತಿ ಸೊಬಗು? ನಮ್ಮನ್ನು ಬಿಟ್ಟು ಬಹುದೂರ ಹೋಗುತ್ತಿದೆ!ಏನಾದರೊಂದು ಪಡೆಯಲು ಇನ್ನೊಂದು ಕಳೆದುಕೊಳ್ಳಬೇಕು ಎನ್ನುವ ಮಾತು ಇಲ್ಲಿ ನಿಜ ಎನಿಸುತ್ತದೆ. ಇಲ್ಲಿ ಕೆರೆಯೊಂದೇ ಪ್ರಕೃತಿಯ ಸುಂದರ ಅನುಭವ ನೀಡುತ್ತದೆ ಎಂದಲ್ಲ, ಪ್ರಕೃತಿಯ ಎಲ್ಲಾ ಅನುಭವಗಳಿಂದಲೂ ನಾವು ವಂಚಿತರಾಗುತ್ತಿದ್ದೇವೆ.

ಏಕೆ ಹೀಗಾಯ್ತು ಎಂದು ಯೋಚಿಸುವ ಮೊದಲು ನಮ್ಮಲೇ ಒಂದು ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ಆ ದಿನಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿತ್ತು, ಕಾಲಕಾಲಕ್ಕೆ ಮಳೆಯಾಗುತ್ತಿದ್ದರಿಂದ ಕೆರೆ-ಕಟ್ಟೆಗಳು ತುಂಬಿ, ಸಮೃದ್ದಿಯಾಗಿ ಮುಂದಿನ ವರ್ಷದವರೆಗೆ ರೈತರನ್ನು ಕಾಯುತ್ತಿತ್ತು.

ಆದರೆ ಈಗ? ಮಳೆಯಾಗಲು ಮಳೆಗಾಲವೇ ಬೇಕಾಗಿಲ್ಲ, ಯಾವ ಕಾಲವಾದರೂ ಸೈ. ಜಗತ್ತು ವೇಗವಾಗಿ ಓಡುತ್ತಿದೆ, ಇದರಿಂದ ಮಳೆಯೂ ಹೊರತಾಗಿಲ್ಲ, ಮಳೆಗಾಲ ಶುರುವಾಗಿ ೧೫ ದಿನಗಳಲ್ಲೇ ಕರೆ-ಕಟ್ಟೆಗಳು ಭರ್ತಿ! ಮುಂದಿನ ದಿನಗಳಲ್ಲಿ ಮುಳುಗಡೆ, ಪ್ರವಾಹ.... ಹೀಗೆ ಅನಾವೃಷ್ಟಿಯದ್ದೇ ಕಾರುಬಾರು. ಅಲ್ಲದೇ ಜಾಗತೀಕರಣದ ಬಿಸಿ ಪ್ರಕೃತಿಯ ಮೇಲೂ ತಟ್ಟಿದ್ದು, ಅದರ ಪರಿಣಾಮವನ್ನು ನಾವು ಇಂದು ಎದುರಿಸುತ್ತಿದ್ದೇವೆ.

ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ವಿಪರೀತವಾಗಿ ಬಳಸಿಕೊಂಡ ಮಾನವ, ಇಂದು ಅದಕ್ಕೆ ಬೆಲೆತೆರುತ್ತಿದ್ದಾನೆ ಎಂದರೆ ತಪ್ಪಾಗಲಾರದು. ಮಳೆಗೆ ಮೂಲ ಆಸರೆಯಾದ ಅರಣ್ಯಗಳನ್ನು ನಾಶ ಮಾಡಿದ, ಅದರಿಂದಾಗಿ ಈಗ ಮಳೆಯ ಆಗಮನವೇ ಅಪರೂಪವಾಗಿದೆ.

ಮಳೆ ಬಿದ್ದರೂ ಅದರ ರುದ್ರನರ್ತನಕ್ಕೆ ಬಲಿಯಾದವರ ಸಂಖ್ಯೆ ಅದೆಷ್ಟೋ? ಇದರಿಂದ ಪಾರಾಗಲು ಗಿಡ ನೆಡಲು ರೂಪಿಸಿದ ವನಮಹೋತ್ಸವ ಕಾರ್ಯಕ್ರಮ ಕಾಟಾಚಾರಕ್ಕೆ ಎನ್ನುವಂತಾಗಿದೆ.ಒಟ್ಟಾರೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮಳೆಯ ಒರತೆಗಳಾದ ಕೆರೆ-ಕಟ್ಟೆಗಳು ಹೇಳಹೆಸರಿಲ್ಲದಂತಾಗಿ, ಮುಂದಿನ ದಿನಗಳಲ್ಲಿ ಚಿತ್ರಗಳಲ್ಲಿ ಮಾತ್ರ ಅವುಗಳ ಸೊಬಗನ್ನು ವೀಕ್ಷಿಸಬೇಕಾದ ಅನಿವಾರ್ಯತೆ ನಮಗೆ ಎದುರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಾಗಾಗಿ ಮುಂದಿನ ದಿನಗಳಲ್ಲಾದರೂ ಅರಣ್ಯಗಳನ್ನು ಬೆಳೆಸಿ, ಪರಿಸರವನ್ನು ಉಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕಾಗಿದೆ. ಮನೆಯಲ್ಲಿ ಒಂದು ಗಿಡ ನೆಟ್ಟು, ಅದನ್ನು ಪೋಷಿಸಿದರೆ, ಪ್ರಕೃತಿಗೆ ನಾವು ಕೊಡುಗೆ ನೀಡಿದಂತಾಗುತ್ತದೆ ಎಂಬ ಮಾತು ಅಕ್ಷರಷಹ ಸತ್ಯ.

ಹೀಗಾದಾಗ ಮುಂದಿನ ದಿನಗಳಲ್ಲಿ ಹತ್ತು ವರ್ಷಗಳ ಹಿಂದಿನ ವೈಭವ ಮರುಕಳಿಸುವುದರಲ್ಲಿ ಯಾವುದೇ ಸಂಶಯ ಇಲ್ಲ. ಆಗಾದಾಗ ಮಾತ್ರ ಮಳೆರಾಯನಿಗೆ ನಮ್ಮ ಮೊರೆ ಕೇಳಿಸಿ, ಇಳೆ ತಂಪಾಗಿಸುವುದರಲ್ಲಿ ಸಂಶಯವಿಲ್ಲ ಅಲ್ಲವೇ? ಹಾಗಾಗಿ ಇಂದೇ ಒಂದು ಸಸಿ ಬೆಳೆಸೋಣವೇ?

Thursday, December 25, 2008

ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುವ ಯುವಜನಾಂಗ ಹಾದಿತಪ್ಪುತ್ತಿರುವುದೆಲ್ಲಿ?


ನೀರು ಸೇದಿ ಸೇದಿನೆಲವ ಅಗೆದು, ಅಗೆದುಎಪ್ಪತ್ತಾದರೂ ಇಪ್ಪತ್ತರಂತೆ ಕಾಣುತ್ತಿದ್ದರು ಅಂದಿನವರು!ಬೀಡಿ, ಸಿಗರೇಟ್ ಸೇದಿ ಸೇದಿಗುಟ್ಕಾ, ಪಾನ್ ಪರಾಗ್ ಅಗಿದು, ಅಗಿದುಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುತ್ತಾರೆ ಇಂದಿನವರು!
ಈ ಚುಟುಕು ಕವನ ಎಷ್ಟೊಂದು ಅರ್ಥಗರ್ಭಿತ ಅಲ್ಲವೇ? ಇಂದಿನ ಯುವ ಸಮುದಾಯ ಎಲ್ಲಿ ದಾರಿ ತಪ್ಪುತ್ತಿದೆ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ ಹೇಳಿಬಿಡುವ ಈ ಚುಟುಕು, ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು ಎಂಬ ಗಾದೆಯನ್ನು ನೆನಪಿಸುತ್ತದೆ.

ಇಸ್ಪೀಟ್ ಗೊತ್ತಿಲ್ಲ, ನೀರು ಕುಡಿದದ್ದು ಬಿಟ್ಟರೆ ಬೇರೇನನ್ನೂ ಕುಡಿದಿಲ್ಲ, ಹುಡುಗಿಯರೆಂದರೆ ಅಲರ್ಜಿ, ಲಾಟರಿಯಿಂದ ಬಲುದೂರ, ಸಿಗರೇಟ್ ಹೊಗೆ ಕಂಡರೆ ಮಾರುದ್ದ, ಗಾಂಜಾ, ಡ್ರಗ್ಸ್ ಎಂದರೇನು? ಎನ್ನುವ ಯುವಕ ಎಂದರೆ ತನ್ನ ಸಹಪಾಟಿಗಳ ದೃಷ್ಟಿಯಲ್ಲಿ ‘ಗಾಂಧಿ’ ಎಂದೇ ಬಿಂಭಿತ.

ಬರೇ ಓದಿಕೊಂಡು ಕಾಲ ಕಳೆಯುವ, ಬೇರೆ ಯಾವುದರಲ್ಲೂ ಆಸಕ್ತಿಯನ್ನೇ ತೋರದ ವಿದ್ಯಾರ್ಥಿಗಳು, ತಾವು ಓದುವ ಶಾಲೆ, ಕಾಲೇಜುಗಳಲ್ಲೇ ಅಸ್ಪೃಷ್ಯರು.

ವಿದ್ಯಾರ್ಥಿ ಜೀವನವೆಂದರೆ ಎಂಜಾಯ್ ಮಾಡುವುದು ಎಂದೇ ತಿಳಿದಿರುವ ಮಂದಿ ಓದುವ ವಿದ್ಯಾರ್ಥಿಗಳಿಂದ ದೂರವೇ ಉಳಿಯುವುದು ಇಂದಿನ ವಿಶೇಷ. ಯಾರದೋ ದುಡ್ಡಿನಲ್ಲಿ ಯೆಲ್ಲಮ್ಮನ ಜಾತ್ರೆ ಮಾಡುತ್ತಾ, ಸಿನಿಮಾ, ಟಾಕೀಸ್, ಬಸ್ ನಿಲ್ದಾಣ, ತಮ್ಮ ಮಾಮೂಲಿ ಅಡ್ಡಗಳಲ್ಲಿ ಕಾಲ ಕಳೆಯುತ್ತಾ ಇರುವುದು ಇವರ ಟ್ರೆಂಡ್.ಇಂಥಹ ಆಲೋಚನೆಯಲ್ಲಿ ಯುವತಿಯರೂ ಹಿಂದೆ ಬಿದ್ದಿಲ್ಲ.

ಕಾಲೇಜು ಮೆಟ್ಟಿಲು ಹತ್ತಿದ ದಿನದಿಂದಲೇ ಲೋಕವೆಲ್ಲಾ ಸುಂದರವಾಗಿ ಕಾಣುವಾಗ ತಾವೂ ಇನ್ನಷ್ಟು ಸುಂದರ ಕೊಡುಗೆ ನೀಡಲು ಮುಂದಾಗುತ್ತಾರೆ. ಪೆಪ್ಸಿ, ಕೋಕ್ ನಂತಹಾ ಪಾನೀಯಗಳು ಇವರ ಕ್ಯನಲ್ಲಿ ಫ್ಯಾಷನ್ ಆಗಿಬಿಡುತ್ತವೆ. ಪಾಸಾದ್ರೆ ಕಾಲೇಜು, ಫೇಲಾದ್ರೆ ಮ್ಯಾರೇಜು ಇದ್ದೇ ಇದೆಯಲ್ಲ ಎಂಬ ಭರವಸೆ ಫ್ಯಾಷನ್ ಲೋಕದ ಕದ ತಟ್ಟಲು ಪ್ರೇರೇಪಿಸಲೂಬಹುದು.

ಇದರರ್ಥ ಫ್ಯಾಷನ್ ಗೆ ಹೊರತಾದ ಯುವತಿಯರು ಇಲ್ಲವೆಂದೇನಿಲ್ಲ.ಯುವಕರಲ್ಲಿ ಇಂದು ಹೆಚ್ಚಾಗಿ ಕಂಡುಬರುವುದು ಸಿಗ್ರೇಟ್ ಸೇವನೆ. ಇದೊಂದು ಫ್ಯಾಷನ್. ಕಾಲೇಜು ವಿದ್ಯಾರ್ಥಿಗಳಲ್ಲಿ ಸಿಗ್ರೇಟ್ ಸೇದುವವರಿಗೆ ಒಂದು ಉನ್ನತ ಸ್ಥಾನ! ಅದೂ ವಿಲನ್ ಪಟ್ಟ. ಸಿಗರೇಟ್ ಜೊತೆಗೆ ಪಾನ್ ಪರಾಗ್ ಇದ್ದರೆ ಮಜಾ ಎಂದು ಯಾರೋ ಅಂದ್ರೆ ಅದನ್ನು ಶಿರಷಹಾ ಇವ್ರು ಪಾಲಿಸುತ್ತಾರೆ. ಇವೆರೆಡೂ ಇದ್ದರೆ ಒಂದು ಸೀನ್ ಕ್ರಿಯೇಟ್ ಮಾಡಲು ಆಗೊಲ್ಲ, ಜೊತೆಗೆ ಬೀಯರ್ ಇದ್ದರೆ ಅದರ ಮಜಾನೇ ಬೇರೆ ಎಂದು ಮುಂದುವರೆಯುತ್ತಾರೆ.

ಕಾಲೇಜಿನ ಕ್ಯಾಂಪಸ್ ನಲ್ಲಿ ಕಿಡಿಗೇಡಿಗಳು ಗಾಂಜಾ, ಅಫೀಮು ಮಾರಾಟ ಮಾಡುವ ಸುದ್ದಿ ಇವರ ಕಿವಿಗೆ ಸೋಕಿದರೆ ಸಾಕು, ತಕ್ಶಣ ಅದರ ರುಚಿಯನ್ನೂ ನೋಡೋಣ ಎಂದು ಅಲ್ಲಿಗೆ ಹಾಜರಿ ಕಡ್ಡಾಯವಾಗುತ್ತದೆ.

ಇದರ ಪ್ರಭಾವದಿಂದ ಇವರು ಹಾಳಾಗುವುದಲ್ಲದೆ ತಮ್ಮ ಪಡೆಯನ್ನೇ ಹಾಳುಮಾಡುತ್ತಾರೆ. ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿತು, ತಮ್ಮ ಭವಿಷ್ಯದ ಹಾದಿಯನ್ನು ದುರ್ಗಮ ಮಾಡಿಕೊಳ್ಳುತ್ತಾ ಸಾಗುವ ಇವರು, ತಮ್ಮ ಅವನತಿಯ ಹಾದಿ ತುಳಿಯುತ್ತಾರೆ ಎಂಬುದು ಕಟುವಾದ ಸತ್ಯ!

ಇನ್ನು ಇಂದಿನ ದಿನಗಳಲ್ಲಿ ನಡೆಯುತ್ತಿರುವ ಬಹುಪಾಲು ಭಯೋತ್ಪಾದನೆ ಇರಬಹುದು, ಕೊಲೆ, ಸುಲಿಗೆ, ದರೋಡೆ ಮುಂತಾದ ಚಟುವಟಿಕೆಗಳಲ್ಲಿ ಯುವಕರದೇ ಸಿಂಹಪಾಲು.ಅಂದರೆ ಯುವಕರನ್ನು ಸರಿದಾರಿಗೆ ತರಲು ಆಗುವುದಿಲ್ಲವೇ?ಖಂಡಿತಾ ಆಗುತ್ತದೆ. ದಾರಿತಪ್ಪಿ ನಡೆಯುತ್ತಿರುವ ಯುವಜನತೆಯಲ್ಲಿ ಚಿಂತನೆ, ದೂರದೃಷ್ಟಿ, ಕುತೂಹಲ, ಸಂಶೋಧನೆ, ಆತ್ಮವಿಶ್ವಾಸ, ವ್ಯಚಾರಿಕ ದೃಷ್ಟಿಕೋನ ಮುಂತಾದವುಗಳನ್ನು ಭಿತ್ತಿ ಬೆಳೆಸಿದರೆ ಮಾತ್ರ ಸರಿದಾರಿಗೆ ತರಲು ಸಾಧ್ಯ ಅಲ್ಲವೇ?

Thursday, December 18, 2008

ನಿಧಿ ಬಲಿ ಕೇಳುತ್ತಿದೆಯೇ!?


ಕೇಳಲೆಷ್ಟು ಭಯಂಕರವೋ ಅಷ್ಟೇ ಸತ್ಯವೂ ಕೂಡಾ.
ಆಶ್ಚರ್ಯವಾಗುತ್ತಿದೆಯಾದರೂ ಇದು ಸತ್ಯ! ಇಂಥಹಾ ಅವಘಡಗಳು ಇಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ ಎಂದರೆ ತಪ್ಪಾಗಲಾರದು.
ಬೆಂಗಳೂರು-ಮ್ವಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಸುಮಾರು ೬೫ ಕಿ.ಮೀ. ದೂರದಲ್ಲಿ ಒಂದು ಊರು ಇದೆ ಕಣ್ರೀ. ಈ ಗ್ರಾಮದ ವ್ಯಾಪ್ತಿಯಲ್ಲಿ ತಿಂಗಳಿಗೆ ಇಲ್ಲವೆಂದರೂ ನಾಲ್ಕಾರು ಅಪಘಾತಗಳು ಸಂಭವಿಸುವುದು, ಕನಿಷ್ಟ ಒಬ್ಬರಾದರೂ ಬಲಿಯಾಗುವುದು ಗ್ಯಾರಂಟಿ!
ಗ್ರಾಮದ ವಿಶಿಷ್ಟತೆಗಳು: ಇದೊಂದು ಪುರಾತನ, ಹೊಳೆಯ ಅಂಚಿನಲ್ಲಿರುವ ಗ್ರಾಮ. ಈ ಗ್ರಾಮಕ್ಕೆ ಶತಮಾನಗಳಷ್ಟು ವರ್ಷಗಳ ಇತಿಹಾಸವಿದೆ. ಕಣ್ವ ಮಹರ್ಷಿಗಳು ಇಲ್ಲಿ ಸಂಚರಿಸುತ್ತಾ, ದಿನನಿತ್ಯಾ ಹೊಳೆಯಲ್ಲಿ ಸ್ನಾನ ಮಾಡಿ ತಪಸ್ಸು ಮಾಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳೂ ಸಹ ಇವೆ.
ಈ ಗ್ರಾಮದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿರುವ ದೇವಾಲಯಗಳು ಎನ್ನಲಾದ ಸುಮಾರು ೧೦ಕ್ಕೂ ಹೆಚ್ಚು ದೇವಾಲಯಗಳು ಇವೆ. ಇವುಗಳಲ್ಲಿ ಶ್ರೀ ಅಪ್ರಮೇಯ ದೇವಸ್ಥಾನವೂ ಒಂದು. ಇದು ತಮಗೆ ತಿಳಿದಿರಲೂಬಹುದು. ಈ ದೇವಸ್ಥಾನ ಪುರಾತನ ಕಾಲದಿಂದಲೂ ಭಕ್ತರ ಎಲ್ಲಾ ಅಭೀಷ್ಟೆಗಳನ್ನು ಈಡೇರಿಸುತ್ತಿದೆ ಎಂದು ಸುತ್ತಮುತ್ತಲ ಜನರ ಅನಿಸಿಕೆಯಾಗಿದೆ.
ಇಲ್ಲಿನ ದೇವಾಲಯಗಳಲ್ಲಿ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ನಿಧಿ ಅಡಗಿಸಿಟ್ಟಿದ್ದಾರೆ ಎನ್ನುವ ನಂಬಿಕೆ ಇಲ್ಲಿನ ಗ್ರಾಮದವರಲ್ಲಿದ್ದು, ಇದೇ ಈ ಎಲ್ಲಾ ಅಪಘಾತಗಳು, ಅವಘಢಗಳಿಗೆ ಕಾರಣವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ನಂಬಲು ಸಾಕಷ್ಟು ಅನುಭವಗಳೂ ಸಹ ಇಲ್ಲಿನ ಜನರಿಗೆ ಆಗಿವೆ.
ಈ ದೇವಾಲಯಗಳಲ್ಲಿನ ನಿಧಿಯನ್ನು ರಾಹು ಕಾಯುತ್ತಿದೆ ಎನ್ನಲಾಗಿದ್ದು, ಪ್ರತೀ ಅಮಾವಾಸ್ಯೆ, ಹುಣ್ಣಿಮೆಗಳಂದು ಈ ಭಾಗದಲ್ಲಿ ರಾಹು ನರಬಲಿ, ರಕ್ತ ಕೇಳುತ್ತಿದೆ ಎಂದೇ ಬಣ್ಣಿಸಲಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಈ ಗ್ರಾಮದ ಆರಂಭದಿಂದ ಕೊನೆಯವರೆಗೂ ಈ ದಿನಗಳಲ್ಲಿ ಒಂದಾದರೊಂದು ಅಪಘಾತಗಳು ನಡೆಯುತ್ತಲೇ ಇವೆ. ತಿಂಗಳಿಗೆ ಇಲ್ಲವೆಂದರೂ ಒಬ್ಬರಾದರೂ ಸಾಯುತ್ತಿದ್ದಾರೆ.
ನಂಬಬಹುದೇ: ಮಾನವ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮೆರೆಯುತ್ತಿದ್ದರೂ, ಪ್ರಕೃತಿ ನಿಯಮಗಳಿಗೆ ವಿರುದ್ದವಾಗಿ ಏನೂ ಸಾಧಿಸಲು ಸಾದ್ಯವಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಈ ‘ಬಲಿ ಪುರಾಣ’!
ಜಗತ್ತು ಎಷ್ಟೇ ಮುಂಚೂಣಿಯಲ್ಲಿದ್ದರೂ ಪ್ರಕೃತಿಯನ್ನು ಮೀರಿಸಲು ಸಾದ್ಯವಾಗುವುದಿಲ್ಲ. ನಾವು ದೇವರಿದ್ದಾನೆ ಎಂಬುದನ್ನು ನಂಬುವುದಾದರೆ ಇದನ್ನೂ ನಂಬಲೇ ಬೇಕಲ್ಲವೇ?