Thursday, December 18, 2008

ನಿಧಿ ಬಲಿ ಕೇಳುತ್ತಿದೆಯೇ!?


ಕೇಳಲೆಷ್ಟು ಭಯಂಕರವೋ ಅಷ್ಟೇ ಸತ್ಯವೂ ಕೂಡಾ.
ಆಶ್ಚರ್ಯವಾಗುತ್ತಿದೆಯಾದರೂ ಇದು ಸತ್ಯ! ಇಂಥಹಾ ಅವಘಡಗಳು ಇಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ ಎಂದರೆ ತಪ್ಪಾಗಲಾರದು.
ಬೆಂಗಳೂರು-ಮ್ವಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಸುಮಾರು ೬೫ ಕಿ.ಮೀ. ದೂರದಲ್ಲಿ ಒಂದು ಊರು ಇದೆ ಕಣ್ರೀ. ಈ ಗ್ರಾಮದ ವ್ಯಾಪ್ತಿಯಲ್ಲಿ ತಿಂಗಳಿಗೆ ಇಲ್ಲವೆಂದರೂ ನಾಲ್ಕಾರು ಅಪಘಾತಗಳು ಸಂಭವಿಸುವುದು, ಕನಿಷ್ಟ ಒಬ್ಬರಾದರೂ ಬಲಿಯಾಗುವುದು ಗ್ಯಾರಂಟಿ!
ಗ್ರಾಮದ ವಿಶಿಷ್ಟತೆಗಳು: ಇದೊಂದು ಪುರಾತನ, ಹೊಳೆಯ ಅಂಚಿನಲ್ಲಿರುವ ಗ್ರಾಮ. ಈ ಗ್ರಾಮಕ್ಕೆ ಶತಮಾನಗಳಷ್ಟು ವರ್ಷಗಳ ಇತಿಹಾಸವಿದೆ. ಕಣ್ವ ಮಹರ್ಷಿಗಳು ಇಲ್ಲಿ ಸಂಚರಿಸುತ್ತಾ, ದಿನನಿತ್ಯಾ ಹೊಳೆಯಲ್ಲಿ ಸ್ನಾನ ಮಾಡಿ ತಪಸ್ಸು ಮಾಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳೂ ಸಹ ಇವೆ.
ಈ ಗ್ರಾಮದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿರುವ ದೇವಾಲಯಗಳು ಎನ್ನಲಾದ ಸುಮಾರು ೧೦ಕ್ಕೂ ಹೆಚ್ಚು ದೇವಾಲಯಗಳು ಇವೆ. ಇವುಗಳಲ್ಲಿ ಶ್ರೀ ಅಪ್ರಮೇಯ ದೇವಸ್ಥಾನವೂ ಒಂದು. ಇದು ತಮಗೆ ತಿಳಿದಿರಲೂಬಹುದು. ಈ ದೇವಸ್ಥಾನ ಪುರಾತನ ಕಾಲದಿಂದಲೂ ಭಕ್ತರ ಎಲ್ಲಾ ಅಭೀಷ್ಟೆಗಳನ್ನು ಈಡೇರಿಸುತ್ತಿದೆ ಎಂದು ಸುತ್ತಮುತ್ತಲ ಜನರ ಅನಿಸಿಕೆಯಾಗಿದೆ.
ಇಲ್ಲಿನ ದೇವಾಲಯಗಳಲ್ಲಿ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ನಿಧಿ ಅಡಗಿಸಿಟ್ಟಿದ್ದಾರೆ ಎನ್ನುವ ನಂಬಿಕೆ ಇಲ್ಲಿನ ಗ್ರಾಮದವರಲ್ಲಿದ್ದು, ಇದೇ ಈ ಎಲ್ಲಾ ಅಪಘಾತಗಳು, ಅವಘಢಗಳಿಗೆ ಕಾರಣವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ನಂಬಲು ಸಾಕಷ್ಟು ಅನುಭವಗಳೂ ಸಹ ಇಲ್ಲಿನ ಜನರಿಗೆ ಆಗಿವೆ.
ಈ ದೇವಾಲಯಗಳಲ್ಲಿನ ನಿಧಿಯನ್ನು ರಾಹು ಕಾಯುತ್ತಿದೆ ಎನ್ನಲಾಗಿದ್ದು, ಪ್ರತೀ ಅಮಾವಾಸ್ಯೆ, ಹುಣ್ಣಿಮೆಗಳಂದು ಈ ಭಾಗದಲ್ಲಿ ರಾಹು ನರಬಲಿ, ರಕ್ತ ಕೇಳುತ್ತಿದೆ ಎಂದೇ ಬಣ್ಣಿಸಲಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಈ ಗ್ರಾಮದ ಆರಂಭದಿಂದ ಕೊನೆಯವರೆಗೂ ಈ ದಿನಗಳಲ್ಲಿ ಒಂದಾದರೊಂದು ಅಪಘಾತಗಳು ನಡೆಯುತ್ತಲೇ ಇವೆ. ತಿಂಗಳಿಗೆ ಇಲ್ಲವೆಂದರೂ ಒಬ್ಬರಾದರೂ ಸಾಯುತ್ತಿದ್ದಾರೆ.
ನಂಬಬಹುದೇ: ಮಾನವ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮೆರೆಯುತ್ತಿದ್ದರೂ, ಪ್ರಕೃತಿ ನಿಯಮಗಳಿಗೆ ವಿರುದ್ದವಾಗಿ ಏನೂ ಸಾಧಿಸಲು ಸಾದ್ಯವಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಈ ‘ಬಲಿ ಪುರಾಣ’!
ಜಗತ್ತು ಎಷ್ಟೇ ಮುಂಚೂಣಿಯಲ್ಲಿದ್ದರೂ ಪ್ರಕೃತಿಯನ್ನು ಮೀರಿಸಲು ಸಾದ್ಯವಾಗುವುದಿಲ್ಲ. ನಾವು ದೇವರಿದ್ದಾನೆ ಎಂಬುದನ್ನು ನಂಬುವುದಾದರೆ ಇದನ್ನೂ ನಂಬಲೇ ಬೇಕಲ್ಲವೇ?