Thursday, December 25, 2008

ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುವ ಯುವಜನಾಂಗ ಹಾದಿತಪ್ಪುತ್ತಿರುವುದೆಲ್ಲಿ?


ನೀರು ಸೇದಿ ಸೇದಿನೆಲವ ಅಗೆದು, ಅಗೆದುಎಪ್ಪತ್ತಾದರೂ ಇಪ್ಪತ್ತರಂತೆ ಕಾಣುತ್ತಿದ್ದರು ಅಂದಿನವರು!ಬೀಡಿ, ಸಿಗರೇಟ್ ಸೇದಿ ಸೇದಿಗುಟ್ಕಾ, ಪಾನ್ ಪರಾಗ್ ಅಗಿದು, ಅಗಿದುಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುತ್ತಾರೆ ಇಂದಿನವರು!
ಈ ಚುಟುಕು ಕವನ ಎಷ್ಟೊಂದು ಅರ್ಥಗರ್ಭಿತ ಅಲ್ಲವೇ? ಇಂದಿನ ಯುವ ಸಮುದಾಯ ಎಲ್ಲಿ ದಾರಿ ತಪ್ಪುತ್ತಿದೆ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ ಹೇಳಿಬಿಡುವ ಈ ಚುಟುಕು, ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು ಎಂಬ ಗಾದೆಯನ್ನು ನೆನಪಿಸುತ್ತದೆ.

ಇಸ್ಪೀಟ್ ಗೊತ್ತಿಲ್ಲ, ನೀರು ಕುಡಿದದ್ದು ಬಿಟ್ಟರೆ ಬೇರೇನನ್ನೂ ಕುಡಿದಿಲ್ಲ, ಹುಡುಗಿಯರೆಂದರೆ ಅಲರ್ಜಿ, ಲಾಟರಿಯಿಂದ ಬಲುದೂರ, ಸಿಗರೇಟ್ ಹೊಗೆ ಕಂಡರೆ ಮಾರುದ್ದ, ಗಾಂಜಾ, ಡ್ರಗ್ಸ್ ಎಂದರೇನು? ಎನ್ನುವ ಯುವಕ ಎಂದರೆ ತನ್ನ ಸಹಪಾಟಿಗಳ ದೃಷ್ಟಿಯಲ್ಲಿ ‘ಗಾಂಧಿ’ ಎಂದೇ ಬಿಂಭಿತ.

ಬರೇ ಓದಿಕೊಂಡು ಕಾಲ ಕಳೆಯುವ, ಬೇರೆ ಯಾವುದರಲ್ಲೂ ಆಸಕ್ತಿಯನ್ನೇ ತೋರದ ವಿದ್ಯಾರ್ಥಿಗಳು, ತಾವು ಓದುವ ಶಾಲೆ, ಕಾಲೇಜುಗಳಲ್ಲೇ ಅಸ್ಪೃಷ್ಯರು.

ವಿದ್ಯಾರ್ಥಿ ಜೀವನವೆಂದರೆ ಎಂಜಾಯ್ ಮಾಡುವುದು ಎಂದೇ ತಿಳಿದಿರುವ ಮಂದಿ ಓದುವ ವಿದ್ಯಾರ್ಥಿಗಳಿಂದ ದೂರವೇ ಉಳಿಯುವುದು ಇಂದಿನ ವಿಶೇಷ. ಯಾರದೋ ದುಡ್ಡಿನಲ್ಲಿ ಯೆಲ್ಲಮ್ಮನ ಜಾತ್ರೆ ಮಾಡುತ್ತಾ, ಸಿನಿಮಾ, ಟಾಕೀಸ್, ಬಸ್ ನಿಲ್ದಾಣ, ತಮ್ಮ ಮಾಮೂಲಿ ಅಡ್ಡಗಳಲ್ಲಿ ಕಾಲ ಕಳೆಯುತ್ತಾ ಇರುವುದು ಇವರ ಟ್ರೆಂಡ್.ಇಂಥಹ ಆಲೋಚನೆಯಲ್ಲಿ ಯುವತಿಯರೂ ಹಿಂದೆ ಬಿದ್ದಿಲ್ಲ.

ಕಾಲೇಜು ಮೆಟ್ಟಿಲು ಹತ್ತಿದ ದಿನದಿಂದಲೇ ಲೋಕವೆಲ್ಲಾ ಸುಂದರವಾಗಿ ಕಾಣುವಾಗ ತಾವೂ ಇನ್ನಷ್ಟು ಸುಂದರ ಕೊಡುಗೆ ನೀಡಲು ಮುಂದಾಗುತ್ತಾರೆ. ಪೆಪ್ಸಿ, ಕೋಕ್ ನಂತಹಾ ಪಾನೀಯಗಳು ಇವರ ಕ್ಯನಲ್ಲಿ ಫ್ಯಾಷನ್ ಆಗಿಬಿಡುತ್ತವೆ. ಪಾಸಾದ್ರೆ ಕಾಲೇಜು, ಫೇಲಾದ್ರೆ ಮ್ಯಾರೇಜು ಇದ್ದೇ ಇದೆಯಲ್ಲ ಎಂಬ ಭರವಸೆ ಫ್ಯಾಷನ್ ಲೋಕದ ಕದ ತಟ್ಟಲು ಪ್ರೇರೇಪಿಸಲೂಬಹುದು.

ಇದರರ್ಥ ಫ್ಯಾಷನ್ ಗೆ ಹೊರತಾದ ಯುವತಿಯರು ಇಲ್ಲವೆಂದೇನಿಲ್ಲ.ಯುವಕರಲ್ಲಿ ಇಂದು ಹೆಚ್ಚಾಗಿ ಕಂಡುಬರುವುದು ಸಿಗ್ರೇಟ್ ಸೇವನೆ. ಇದೊಂದು ಫ್ಯಾಷನ್. ಕಾಲೇಜು ವಿದ್ಯಾರ್ಥಿಗಳಲ್ಲಿ ಸಿಗ್ರೇಟ್ ಸೇದುವವರಿಗೆ ಒಂದು ಉನ್ನತ ಸ್ಥಾನ! ಅದೂ ವಿಲನ್ ಪಟ್ಟ. ಸಿಗರೇಟ್ ಜೊತೆಗೆ ಪಾನ್ ಪರಾಗ್ ಇದ್ದರೆ ಮಜಾ ಎಂದು ಯಾರೋ ಅಂದ್ರೆ ಅದನ್ನು ಶಿರಷಹಾ ಇವ್ರು ಪಾಲಿಸುತ್ತಾರೆ. ಇವೆರೆಡೂ ಇದ್ದರೆ ಒಂದು ಸೀನ್ ಕ್ರಿಯೇಟ್ ಮಾಡಲು ಆಗೊಲ್ಲ, ಜೊತೆಗೆ ಬೀಯರ್ ಇದ್ದರೆ ಅದರ ಮಜಾನೇ ಬೇರೆ ಎಂದು ಮುಂದುವರೆಯುತ್ತಾರೆ.

ಕಾಲೇಜಿನ ಕ್ಯಾಂಪಸ್ ನಲ್ಲಿ ಕಿಡಿಗೇಡಿಗಳು ಗಾಂಜಾ, ಅಫೀಮು ಮಾರಾಟ ಮಾಡುವ ಸುದ್ದಿ ಇವರ ಕಿವಿಗೆ ಸೋಕಿದರೆ ಸಾಕು, ತಕ್ಶಣ ಅದರ ರುಚಿಯನ್ನೂ ನೋಡೋಣ ಎಂದು ಅಲ್ಲಿಗೆ ಹಾಜರಿ ಕಡ್ಡಾಯವಾಗುತ್ತದೆ.

ಇದರ ಪ್ರಭಾವದಿಂದ ಇವರು ಹಾಳಾಗುವುದಲ್ಲದೆ ತಮ್ಮ ಪಡೆಯನ್ನೇ ಹಾಳುಮಾಡುತ್ತಾರೆ. ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿತು, ತಮ್ಮ ಭವಿಷ್ಯದ ಹಾದಿಯನ್ನು ದುರ್ಗಮ ಮಾಡಿಕೊಳ್ಳುತ್ತಾ ಸಾಗುವ ಇವರು, ತಮ್ಮ ಅವನತಿಯ ಹಾದಿ ತುಳಿಯುತ್ತಾರೆ ಎಂಬುದು ಕಟುವಾದ ಸತ್ಯ!

ಇನ್ನು ಇಂದಿನ ದಿನಗಳಲ್ಲಿ ನಡೆಯುತ್ತಿರುವ ಬಹುಪಾಲು ಭಯೋತ್ಪಾದನೆ ಇರಬಹುದು, ಕೊಲೆ, ಸುಲಿಗೆ, ದರೋಡೆ ಮುಂತಾದ ಚಟುವಟಿಕೆಗಳಲ್ಲಿ ಯುವಕರದೇ ಸಿಂಹಪಾಲು.ಅಂದರೆ ಯುವಕರನ್ನು ಸರಿದಾರಿಗೆ ತರಲು ಆಗುವುದಿಲ್ಲವೇ?ಖಂಡಿತಾ ಆಗುತ್ತದೆ. ದಾರಿತಪ್ಪಿ ನಡೆಯುತ್ತಿರುವ ಯುವಜನತೆಯಲ್ಲಿ ಚಿಂತನೆ, ದೂರದೃಷ್ಟಿ, ಕುತೂಹಲ, ಸಂಶೋಧನೆ, ಆತ್ಮವಿಶ್ವಾಸ, ವ್ಯಚಾರಿಕ ದೃಷ್ಟಿಕೋನ ಮುಂತಾದವುಗಳನ್ನು ಭಿತ್ತಿ ಬೆಳೆಸಿದರೆ ಮಾತ್ರ ಸರಿದಾರಿಗೆ ತರಲು ಸಾಧ್ಯ ಅಲ್ಲವೇ?

No comments:

Post a Comment