Friday, January 23, 2009

ಇಷ್ಟಾರ್ಥ ಈಡೇರಿಸುವ ಬಸವ!


ನೀವು ನೆನೆದುಕೊಂಡಂತೆ ಆಗಬೇಕೆ?, ನಿಮಗೆ ಪ್ರೊಮೋಷನ್ ಬೇಕೆ?, ಕುಟುಂಬದಲ್ಲಿ ಶಾಂತಿ ನೆಲೆಸಬೇಕೆ?, ನಿಮ್ಮ ತೊಂದರೆ ಪರಿಹಾರವಾಗಬೇಕೆ?, ಸಂತಾನಭಾಗ್ಯ ಬೇಕೆ?, ನಿಮ್ಮ ಎಲ್ಲಾ ದೋಷ ಕಳೆಯಬೇಕೆ?...ಹಾಗಾದ್ರೆ ಯಾಕೆ ತಡ? ಬನ್ನಿ ನಮ್ಮ ಬಸವನ ಬಳಿಗೆ...!!!ಎಲ್ಲಿದೆ ಅಂತ ಕೇಳ್ತಾಇದೀರಾ? ಮಾಯಾನಗರಿಯೆಂಬ ಬೆಂಗಳೂರಿನಿಂದ ಕೆಲವೇ ಕಿ.ಮೀ.ಗಳ ದೂರದಲ್ಲೇ ಇದೆ ಈ ಬಸವನ ವಾಸ್ತವ್ಯ. ಕಲಿಯುಗದ ನಿಜದೇವರು ಎಂದೇ ಬಿಂಬಿತವಾಗಿರುವ ಈ ಬಸವ ಮಂಡ್ಯ ಜಿಲ್ಲೆಯಲ್ಲಿದೆ.ಆಶ್ಚರ್ಯ ಆದರೂ ನಿಜ ಕಣ್ರೀ. ನಿಮ್ಮ ಎಲ್ಲಾ ಕೋರಿಕೆಗಳನ್ನೂ ಈಡೇರಿಸಲು ಈ ಬಸವನ ಜನನ ಆಗಿದೆ ಎಂದೇ ಹೇಳುತ್ತಾರೆ ಈ ಭಾಗದ ಜನ! ಅದು ನಿಜವೂ ಕೂಡಾ.ಹಾಗಾದ್ರೆ ಬನ್ನಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮಕ್ಕೆ. ಚಿಕ್ಕರಸಿನಕೆರೆಯ ಶ್ರೀ ಕಾಲಭ್ಯರವೇಶ್ವರನ ದೇವಾಲಯಕ್ಕೆ. ಇಲ್ಲೇ ಇರುವುದು ಈ ಬಸವ.ಜಗತ್ತಿನಲ್ಲಿ ನಾನಾ ವಿಸ್ಮಯಗಳನ್ನು ಸೃಷ್ಟಿಸುತ್ತಿರುವ ಮಾನವನಿಂದ ಅಸಾಧ್ಯವಾದ ಕೆಲಸವನ್ನು ಸಾಮಾನ್ಯವಾದ ದನ(ಹಸು) ಮಾಡುತ್ತದೆಯೇ ಎಂದು ಯೋಚಿಸಬೇಡಿ. ಈ ಬಸವ ಎಲ್ಲಾ ದನಗಳ ಹಾಗಲ್ಲ, ಇದಕ್ಕೆ ತನ್ನದೇ ಆದ ಕೆಲವು ವಿಶಿಷ್ಟತೆಗಳು, ಆಚರಣೆಗಳು ಇವೆ.ಈ ಬಸವನ ದರ್ಶನ ಭಾಗ್ಯ ದೊರೆಯುವುದೇ ಪುಣ್ಯ ಕಣ್ರೀ. ಆ ದೇವಾಲಯದ ಬಳಿ ಈ ಬಸವನನ್ನು ನೋಡಲು ಇಡೀ ರಾಜ್ಯದಿಂದಷ್ಟೇ ಅಲ್ಲ, ದೇಶ, ವಿದೇಶಗಳಿಂದಲೂ ಸಹ ಭಕ್ತರು ಆಗಮಿಸುತ್ತಾರೆ.ಇಡೀ ಮಂಡ್ಯ ಜಿಲ್ಲೆಯ ಜನತೆ ಈ ಬಸವನನ್ನು ತಮ್ಮ ಮನೆದೇವರನ್ನಾಗಿ ಮಾಡಿಕೊಂಡಿದ್ದಾರೆ. ಹಾಗೆಯೇ ಈ ಬಸವನೂ ಸಹ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾನೆ. ಈ ಬಸವ ದೇವರ ತದ್ರೂಪು ಎಂದೇ ಜನ ಭಾವಿಸಿ, ಇದನ್ನೇ ನಂಬಿದ್ದಾರೆ. ತಮ್ಮ ಯಾವುದೇ ಕೆಲಸಗಳನ್ನು ಪ್ರಾರಂಭಿಸಲು, ಕಷ್ಟ ನಿವಾರಿಸಿಕೊಳ್ಳಲು ಈ ಬಸವನ ಬಳಿಗೆ ಬರುವ ಜನ, ಹಿಂತಿರುಗಿ ಹೋಗುವಾಗ ನಿರಾಸೆಯಿಂದ ಹೋಗುವುದನ್ನು ಯಾರೂ ಕಂಡಿಲ್ಲವಂತೆ.ಸುಮಾರು ೩೦ ವರ್ಷಗಳಿಂದ ಈ ಬಸವ ಇಲ್ಲಿಯ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದು, ಈ ಬಸವ ಇರುವ ಈ ತಾಣದಲ್ಲಿ ಇಲ್ಲಿಯವರೆಗೂ ಬರಗಾಲವೇ ಬಂದಿಲ್ಲವಂತೆ! ಸುಂದರ ಪ್ರಕೃತಿಯ ಮಡಿಲಿನಲ್ಲಿ, ಮಲೆನಾಡನ್ನೇ ನಾಚಿಸುವಂತೆ ಇಡೀ ಜಿಲ್ಲೆಯನ್ನೇ ಸಂಪದ್ಭರಿತವಾಗಿ ಇಟ್ಟಿರುವ, ಜನರನ್ನು ಕಾಯುತ್ತಿರುವ ಈ ಬಸವ ಈ ಭಾಗದ ಜನರಿಗೆ ಸುಪ್ರೀಮ್ ಕೋರ್ಟ್ ಆಗಿರುವುದು ವಿಶೇಷ.ಈ ಭಾಗದಲ್ಲಿ ಎಲ್ಲಾದರೂ ಕಳ್ಳತನ, ದರೋಡೆ ಮುಂತಾದವುಗಳು ನಡೆದರೆ, ಕಳ್ಳರನ್ನು ಹಿಡಿಯುವ ಕೆಲಸ ಬಸವನದಂತೆ! ಆ ಕಳ್ಳ ಯಾವುದೇ ಗವಿಯಲ್ಲಿ ಅವಿತಿರಲಿ, ಅವನನ್ನು ಶಿಕ್ಷಿಸುವುದು ಬಸವನ ಕೆಲಸ! ಹಾಗಾಗಿ ಈ ಭಾಗದಲ್ಲಿ ಬಸವನಿಗೆ ಹೆದರಿ ಕಳ್ಳರು ಕಾಲ್ಕಿತ್ತಿದ್ದಾರಂತೆ!ಹಾಗೆಯೇ ಈ ಬಸವ ಸುಮ್ಮನೆ ಬಿಟ್ಟಿ ಕೆಲಸ ಮಾಡಿಕೊಡುವುದಿಲ್ಲ! ಅದಕ್ಕೆ ದಕ್ಷಿಣೆಯನ್ನು ಕೊಡಲೇಬೇಕು. ಇಲ್ಲದಿದ್ದರೆ ನಿಮ್ಮ ಕೆಲಸ ಪೆಂಡಿಂಗ್. ಮೋಸ ಮಾಡುವುದು ಇಲ್ಲಿ ನಡೆಯುವುದಿಲ್ಲ. ಮೋಸಗಾರರ ಬಗ್ಗೆ ಇದಕ್ಕೆ ಮೊದಲೇ ಮಾಹಿತಿ ಸಿಕ್ಕಿರುತ್ತದೆ ಹುಷಾರ್!ಹಾಗಾಗಿ ನಿಮ್ಮ ಕೆಲಸಕ್ಕೆ ತಕ್ಕಂತೆ ದಕ್ಷಿಣೆ ನೀಡಲೇಬೇಕು. ಇಂತಿಷ್ಟು ಅಂತಲ್ಲ, ಕಡಿಮೆಯನ್ನೂ ತೆಗೆದುಕೊಳ್ಳುವುದಿಲ್ಲ. ಕೊಡದಿದ್ದರೆ ನಿಮ್ಮ ಮನೆಗೇ ಬಂದೀತು ಜೋಕೆ! ನೀವು ಕೊಡುವವರೆಗೂ ನಿಮ್ಮ ಮನೆ ಬಿಟ್ಟು ಜಗ್ಗುವುದಿಲ್ಲ.ಯಾರೇ ಆಗಲಿ, ಈ ಬಸವನ ಮುಂದೆ ಎಲ್ಲರೂ ಒಂದೆ. ಎಲ್ಲರಿಗೂ ಒಂದೇ ದರ್ಶನ. ಬಡವರಿಗಾಗಲೀ, ಶ್ರೀಮಂತರಿಗಾಗಲೀ, ದೇಶದ ಪ್ರಧಾನಮಂತ್ರಿಗಾಗಲೀ ಯಾರೇ ಬಂದರೂ ಅದಕ್ಕಾಗಿ ಕಾಯಲೇಬೇಕು... ಇದು ಇದರ ನಿಯಮ!ಒಟ್ಟಿನಲ್ಲಿ ಬಸವ ಜನರನ್ನು ಕಾಪಾಡುತ್ತಿರುವುದಂತೂ ಸತ್ಯ. ಒಮ್ಮೆ ಈ ಬಸವನ ದೇವಾಲಯಕ್ಕೆ ಹೋಗಿ ಬಂದಾಗಲೇ ಇದರ ಮಹತ್ವ ತಿಳಿಯುವುದು. ಹಾಗಾಗಿ ಒಮ್ಮೆ ನಿಮ್ಮ ಕಷ್ಟ ಹೇಳಿಕೊಳೋಕೆ ಹೋಗ್ತೀರಿ ತಾನೇ?

No comments:

Post a Comment