Friday, January 23, 2009

18ನೇ ಶತಮಾನಕ್ಕೆ ಹೋಗಬೇಕೆ!? ಹಾಗಾದ್ರೆ ಬನ್ನಿ

KALLINA RATHA
ಇಂದಿನ ಬೆಂಗಳೂರಿನ ಆ ವಾಯುಮಾಲಿನ್ಯದಿಂದಾಗಿ, ಆ ವಾಹನಗಳ ಶಬ್ದಗಳ ಕಿರಿಕಿರಿಯಿಂದಾಗಿ ಬೇಸತ್ತಿದ್ದೀರಾ?ಬೆಂಗಳೂರು ಎಂಬ ಮಾಯೆಯ ಮಹಾನಗರಿಯನ್ನು ಬಿಟ್ಟು, ಸ್ವಲ್ಪ ಸಮಯ ರಿಲ್ಯಾಕ್ಸ ಪಡೆದು, ೧೮ನೇ ಶತಮಾನಕ್ಕೆ ಹೋಗೋಣ ಬನ್ನಿ...!

ಬೆಂಗಳೂರಿನಿಂದ ಮೈಸೂರು ಕಡೆಗೆ ಕೇವಲ ೪೫ ಕಿ.ಮೀ.ಯಲ್ಲಿ ನಿಮಗೆ ಸಿಗುತ್ತದೆ ೧೮ನೇ ಶತಮಾನದ ಚಿತ್ರಣ! ನಿಜ ಕಣ್ರೀ... ಹೆದ್ದಾರಿಯಲ್ಲೇ ಜಾನಪದ ಲೋಕ ಎಂಬ ಒಂದು ಪ್ರಾಚೀನ ಇತಿಹಾಸವನ್ನು ನೆನಪಿಸುವ ಒಂದು ತಾಣ ಇದೆ.

ದಿನನಿತ್ಯದ ಜಂಜಾಟವನ್ನೆಲ್ಲಾ ಮರೆತು, ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಒಂದು ಸಲ ಇಲ್ಲಿಗೆ ಬರಲೇ ಬೇಕು ಕಣ್ರೀ. ಇಲ್ಲಿ ಅಂಥದ್ದೇನಿದೆ ಅಂತೀರಾ...?

ನಿಮ್ಮ ಊಹೆಗೂ ನಿಲುಕದಷ್ಟು ಸಂಗತಿಗಳು ಇಲ್ಲಿ ಸಿಗುತ್ತವೆ. ಹೆಬ್ಬಾಗಿಲಿನಲ್ಲೇ ನಿಮಗೆ ನಮ್ಮ ಪ್ರಾಚೀನ ಗತಕಾಲದ ನೆನಪಾಗುತ್ತದೆ.ಒಳಗೆ ಪ್ರವೇಶ ಮಾಡುತ್ತಿದ್ದಂತೆ ಗಾದೆಗಳ ಬರವಣಿಗೆ ನಿಮ್ಮನ್ನು ಸ್ವಾಗತಿಸುತ್ತವೆ.

ಮುಂದಡಿ ಇಡುತ್ತಿದ್ದಂತೆ ನಿಮಗೆ ೧೮ನೇ ಶತಮಾನದ ಅನುಭವ ಆಗಲು ನಿಮಗೆ ಸಾಕಷ್ಟು ಸಮಯ ಬೇಕಾಗುವುದಿಲ್ಲ ಅನಿಸುತ್ತದೆ.

ಮಾರ್ಗದುದ್ದಕ್ಕೂ ತೆಂಗಿನ ಮರಗಳ ಸಾಲು, ಪಕ್ಕದಲ್ಲೇ ಉದ್ಯಾನ, ಅಲ್ಲಲ್ಲಿ ಓಡಾಡುವ ಬಾತುಕೋಳಿಗಳು, ಮರದ ಮೇಲಿಂದಲೇ ನಿಮ್ಮನ್ನು ಸ್ವಾಗತಿಸುವ ವಾನರ ಗುಂಪು, ಆ ಪಕ್ಷಿಗಳ ಚಿಲಿಪಿಲಿ ಕಲರವ, ನಿಜಕ್ಕೂ ಇಂಥಾ ಒಂದು ಅದ್ಭುತ ಲೋಕ ಇನ್ನೂ ಉಳಿದಿದೆಯೇ ಎಂದು ನಿಮಗೆ ಅನ್ನಿಸದೇ ಇರದು!

ಗತಕಾಲದ ಇತಿಹಾಸ ಸಾರುವ ಪಳೆಯುಳಿಕೆಗಳು, ವಸ್ತುಗಳು, ದೇವಾಲಯಗಳು, ಉದ್ಯಾನವನಗಳು, ಕಲಾಕೃತಿಗಳು, ಹಳೆಯ ರಥಗಳು, ಗ್ರಂಥಗಳು, ಲೋಕಮಹಲ್, ವಸ್ತು ಸಂಗ್ರಹಾಲಯ, ಗಿಡ ಮೂಲಿಕೆಗಳು, ಹಂಸವಿಹಾರ, ಕೆರೆ, ಕಾಡು ಹೀಗೆ ಎಲ್ಲಾ ಇಲ್ಲಿ ಕಾಣಸಿಗುತ್ತವೆ.

ಮುಖ್ಯವಾಗಿ ಕ್ರಿ.ಶ.೧೧೫೦ ವರ್ಷಗಳದ್ದು ಎನ್ನಲಾದ ವಿಗ್ರಹಗಳು, ಶಿಲಾಶಾಸನಗಳು, ವೀರಗಲ್ಲು, ಮಾಸ್ತಿಕಲ್ಲುಗಳು, ೧೪-೧೫ನೇ ಶತಮಾನದ ಕಲ್ಲಿನಿಂದ ಕೆತ್ತಲ್ಪಟ್ಟಿರುವ ದೇವರ ವಿಗ್ರಹಗಳು ಇಲ್ಲಿನ ಆಕರ್ಷಣೀಯವಾಗಿವೆ.

ಒಳಗೆ ಹೋದರೆ ನಿಮಗೆ ಅಲ್ಲಿಂದ ಬರಲು ಮನಸೇ ಆಗುವುದಿಲ್ಲ ಎಂಬ ಅನಿಸಿಕೆ ನನ್ನದು.ಬರೆಯಲು ಸಾದ್ಯವಾಗದಷ್ಟು ವಿಸ್ಮಯಗಳು ಇಲ್ಲಿವೆ. ವಿಹರಿಸಿ, ಸಕಾದಾಗ ಅಲ್ಲಿ ಕೂಲಾಗಿ ಕುಳಿತು, ಊಟ ಮಾಡಲು ಪ್ರಸಿದ್ದ ಕಾಮತ್ ಲೋಕರುಚಿ ಭೋಜನಶಾಲೆಯೂ ಸಹ ಇದೆ.

ಬನ್ನಿ ಸ್ವಲ್ಪ ಸಮಯ ನಮ್ಮ ಜಾಗವನ್ನು ಬಿಟ್ಟು ಜಾನಪದ ಲೋಕಕ್ಕೆ ಹೋಗಿ ಬರೋಣ. ನಮ್ಮ್ ಮನವನ್ನು ಸಂತೋಷಪಡಿಸೋಣ. ಬರ್ತೀರಿ ತಾನೆ?

No comments:

Post a Comment