Wednesday, May 13, 2009

ಬಿರು ಬಿಸಿಲಲ್ಲಿ ಬಡಿಯಿತೇ ಬರಸಿಡಿಲು...?



ಆದಿನ ಅದೇನೋ ಗೊತ್ತಿಲ್ಲ, ಯಾವ ದೇವರು ಪ್ರಸನ್ನನಾಗಿ, ಪ್ರತ್ಯಕ್ಷವಾಗಿ ಹೇಳಿದ್ದನೋ ಏನೋ ಎರಡೂವರೆ ವರ್ಷಗಳಿಂದ ಮನೆ ಬಿಟ್ಟು ನನ್ನೊಂದಿಗೆ ಎಲ್ಲೂ ಬರದ ನನ್ನರಸಿ ಇದ್ದಕ್ಕಿದ್ದಂತೆ ನಾಳೆ ಶಿವಗಂಗೆ ಬೆಟ್ಟಕ್ಕೆ ಹೋಗಿ ಬರೋಣ ಅಂತ ನನ್ನ ಬಳಿ ಫೋನಿನಲ್ಲಿ ಉಸುರಿದ್ದಳು. ನನಗಂತೂ ಆಶ್ಚರ್ಯದ ಮೇಲೆ ಅನುಮಾನ. ಇಷ್ಟು ದಿನ ಮನೆ, ಕಾಲೇಜು ಬಿಟ್ಟು ನನ್ನ ಜೊತೆ ಪಕ್ಕದ ಲಾಲ್ ಬಾಗ್ಗೂ ಬಾರದಿದ್ದ ಅವಳು, ಇಂದು ದೂರದ ಬೆಟ್ಟಕ್ಕೆ ಹೋಗಿ ಬರೋಣ ಎನ್ನುತ್ತಿದ್ದಾಳೆ ಎಂದರೆ? ನನಗಂತೂ ಆಕಾಶ ನನ್ನ ತಲೆಗೇ ಬಡಿಯುತ್ತಿದೆಯೇನೋ ಎಂಬಂತೆ ಭಾಸ. ಸ್ವರ್ಗ ಪಕ್ಕದಲ್ಲಿಯೇ ಇದೆ ಎನ್ನುವಷ್ಟು ಸಂತೋಷವಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ.
ಮೊದಲಿನಿಂದಲೂ ಅವಳು ಹಾಗೇನೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ, ಪಾಸಿಟಿವ್ವಾಗಿ ಯೋಚನೆ ಮಾಡುವ ಸ್ವಭಾವ. ಮನೋಶಾಸ್ತ್ರದ ವಿದ್ಯಾರ್ಥಿ ಬೇರೆ. ನನ್ನ ಅವಳ ಭೇಟಿ ಪ್ರತಿನಿತ್ಯ ಅವರ ಮನೆಯ ಬಳಿ ಹಾಗೂ ಕಾಲೇಜು ಬಳಿ ನಿರಂತರವಾಗಿ ನಡೆದೇ ಇತ್ತು. ಹೀಗಿದ್ದೂ ನಮ್ಮ್ಮಿಬ್ಬರ ಸಂಚಾರಿ ದೂರವಾಣಿಗಳು ಮಾತ್ರ ದಿನದ ೨೪ ಗಂಟೆಗಳಲ್ಲಿ ೧೨ ಗಂಟೆ ಸಕ್ರಿಯವಾಗಿ ತಮ್ಮ ಕಾರ್ಯನಿರ್ವಹಿಸುತ್ತಿದ್ದವು. ಹಾಗೆಯೇ ಅವಳನ್ನು ಕಾಲೇಜಿಗೆ ಡ್ರಾಪ್ ಹಾಗೂ ಪಿಕಪ್ ಹೊಣೆ ನನ್ನ ಮೇಲೆಯೇ ಇತ್ತು. ಕಾಲೇಜಿಗೆ ಹೋಗುವ ದಾರಿಯಲ್ಲಿ ಐಸ್ ಕ್ರೀಂ, ದೋಸೆ, ಕಾಫಿಗೆ ಅಂತೆಲ್ಲಾ ಮನೆಯವರಿಗೆ ತಿಳಿಯದ ಹಾಗೆ ಹೋಗುತ್ತಿದ್ದುದು, ಮನೆಯಿಂದ ಕಾಲೇಜಿಗೆ ನನ್ನ ದ್ವಿಚಕ್ರ ರಥದಲ್ಲಿ ಹೋಗುತ್ತಿದ್ದುದು, ಬರುತ್ತಿದ್ದುದು ಮಾತ್ರ ನನ್ನ ದಿನದ ಪ್ರಮುಖ ಕಾರ್ಯಕ್ರಮಗಳಲ್ಲಿ ಸೇರಿದ್ದವು.
 
ಇಷ್ಟಿದ್ದರೂ ಅವರ ಮನೆಯವರಿಗೆ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಹೇಳಿ ಕೇಳಿ ನಂದು ಪಕ್ಕದ ಏರಿಯಾ, ಹಾಗೆ ಅವರ ಮನೆಯವರೆಲ್ಲರೂ ಪರಿಚಯಸ್ತರು ಬೇರೆ. ಹಾಗಾಗಿ ಅವರ ಮನೆ(ನ) ಎಲ್ಲವೂ ನನಗೆ ಚೆನ್ನಾಗಿಯೇ ತಿಳಿದಿತ್ತು. ನನ್ನ ಮತ್ತು ಅವಳ ನಡುವಿನ ಸಂಬಂಧ ಎರಡೂವರೆ ವರ್ಷಗಳ ಹಿಂದೆಯೇ ಪ್ರೀತಿಗೆ ಬದಲಾಗಿದೆ ಎಂಬ ವಿಷಯ ಮಾತ್ರ ಅವರಿಗೆ ತಿಳಿದಿರಲಿಲ್ಲದಿದ್ದುದು ಮಾತ್ರ ನಮ್ಮಿಬ್ಬರಿಗೂ ಖುಷಿ ತಂದಿತ್ತು.
ಸೂರ್ಯ ಮೂಡುವ ಮುನ್ನವೇ ಅವಳ ಮನೆಗೆ ಧಾಂಗುಡಿಯಿಡುತ್ತಿದ್ದ ನಾನು, ನನ್ನ ಬರುವಿಕೆಗೆ ಕಾತರದಿಂದ ಕಾಯುತ್ತಿದ್ದ ಅವಳು...ಹೀಗೆ ನಮ್ಮಿಬ್ಬರ ಪ್ರೇಮ ಯಾರ ಅಡ್ಡಿ, ಆತಂಕವೂ ಇಲ್ಲದೆ ಹೆಮ್ಮರವಾಗಿ ಬೆಳೆಯುತ್ತಲೇ ಇತ್ತು.
 
ಹೀಗಿರುವಾಗ ನಾಳೆ ಬೆಟ್ಟಕ್ಕೆ ಹೋಗೋಣ ಎಂದು ಬೇರೆ ಹೇಳಿದ್ದಾಳೆ. ನನಗಂತೂ ಹಿಂದಿನ ರಾತ್ರಿಯೆಲ್ಲಾ ನಾಳಿನ ನನಸುಗಳ ಬಗ್ಗೆ ಯೋಚನೆ ಮಾಡುತ್ತಾ, ಸಾವಿರಾರು ಕನಸುಗಳನ್ನು ಹೆಣೆಯುತ್ತಾ, ರೋಮಾಂಚಕ ಕ್ಷಣಗಳನ್ನು ಮನದಲ್ಲೇ ನೆನೆಯುತ್ತಾ, ಮಾಡಬೇಕಾಗಿರುವ ಕಾರ್ಯಕ್ರಮಗಳ ಪಟ್ಟಿ ಮಾಡಿ ರಾತ್ರಿಯಿಡೀ ನಿದ್ರೆಯಿಲ್ಲದೆ ಹೊರಡಲು ಸಿದ್ದನಾದೆ. ಬೆಳಿಗ್ಗೆಯೇ ಆಕೆಯ ಮನೆಗೆ ಬಂದು ಜೊತೆಯಲ್ಲಿ ಹೋಗುವುದು ಎಂದು ಕಾರ್ಯಕ್ರಮ ನಿಗಧಿಯಾಯಿತು.
 
ನಿಗಧಿಯಂತೆ ಬೆಳಿಗ್ಗೆಯೇ ೫.೩೦ಕ್ಕೆ ಆಕೆಯ ಮನೆಯಲ್ಲಿ ನಾನು ಹಾಜರ‍್. ಆಕೆಯೂ ಸಹ ಬೆಳಿಗೆಯೇ ಎದ್ದು ನಾ ಬರುವುದನ್ನೇ ಎದುರುನೋಡುತ್ತಿದ್ದಳು. ನಂತರ ಹೊರಟಿತು ನಮ್ಮ ರಥ ಸವಾರಿ. ಎನ್.ಹೆಚ್ ೪ರಲ್ಲಿ ಹೊರಟ ನಮ್ಮ ಸವಾರಿ, ಸುಮಾರು ೧೧ ಗಂಟೆಗೆ ಬೆಟ್ಟ ತಲುಪಿತು. ಬೆಟ್ಟದ ತಳದಲ್ಲಿ ಬೆಳಗಿನ ಉಪಹಾರ ಮುಗಿಸಿ, ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಲು ಶುರುಮಾಡಿದೆವು. ಈ ಮೊದಲು ಸ್ಥಳದ ಪರಿಚಯವಿಲ್ಲದಿದ್ದರೂ ಸಹ ಪರಿಚಯವಿರುವಂತೆ ಆಕೆ ನನ್ನನ್ನು ಕ್‌ಐ ಹಿಡಿದು ಕರೆದೊಯ್ಯುತ್ತಿದ್ದು ನನಗೆ ಬೆಟ್ಟವೇರಲು ಉತ್ಸಾಹ ತಂದುಕೊಡುತ್ತಿದ್ದರೂ ಮನದಲ್ಲಿ ಏನೋ ಆತಂಕ ಮೂಡಲಾರಂಭಿಸಿತ್ತು.
 
ಬೆಟ್ಟದ ಮಧ್ಯಭಾಗಕ್ಕೆ ಹೋಗುತ್ತಿದ್ದಂತೆ ದೇವಸ್ಥಾನ ಎದುರಾಯಿತು. ಅಲ್ಲಿ ಒಂದು ವಿಶೇಷತೆ ಇದೆ. ಅದೇ ಒಳಕಲ್ ತೀರ್ಥ. ಒಂದು ಬಂಡೆಯ ಮಧ್ಯದಲ್ಲಿ ಗುಂಡಿ ನಿ ರ್ಮಾಣವಾಗಿದ್ದು, ಇಲ್ಲಿ ಕ್ಯ ಹಾಕಿದರೆ ಪುಣ್ಯ ಮಾಡಿದ್ದರೆ ನೀರು ಸಿಗುತ್ತದೆ. ಈ ಎಂಬ ಫಲಕ ಅಲ್ಲಿ ತೂಗುಹಾಕಲಾಗಿತ್ತು. ನಾನು ಆಕೆ ಸಹ ಪ್ರಯತ್ನ ಮಾಡಿದೆವು. ನನಗೆ ನೀರು ಸಿಕ್ಕಿದರೆ ಆಕೆಗೆ ಸಿಗಲಿಲ್ಲ! ಆಕೆ ಬೇಜಾರು ಮಾಡಿಕೊಂಡರೂ ನಾನೇ ಸಮಾಧಾನ ಮಾಡಿ, ನೀರು ತೆಗೆದುಕೊಟ್ಟೆ.
ಮುಂದೆ ಬೆಟ್ಟ ಹತ್ತಲು ಮುಂದಾದಾಗ ಅಲ್ಲಿರುವ ವಾನರ ಸಂತತಿ ನಮ್ಮನ್ನು ಕೊಂಚ ಕಾಲ ರಂಜಿಸಿದವು. ಆಕೆಯ ಮೇಲೆ ಬಿದ್ದ ಮಂಗವೊಂದು ಆಕೆಯ ಬ್ಯಾಗ್ ಕಳಚಿಕೊಂಡು ಹೋಯಿತು. ನಂತರ ಅದರಲ್ಲಿ ಏನೂ ತಿನ್ನುವ ಪದಾರ್ಥ ಇಲ್ಲದಿದ್ದರಿಂದ ಬಿಸಾಡಿ ಹೋಯಿತು.ನಂತರ ಬೆಟ್ಟವನ್ನು ತರಾತುರಿಯಿಂದಲೇ ಏರಿ ಮೇಲೆ ಕುಳಿತೆವು.
 
ಇದುವರೆಗೂ ನನ್ನ ಜೊತೆಯಲ್ಲಿಯೇ ಪ್ರೀತಿಯಲ್ಲಿ ಮುಳುಗಿದ್ದ ಆಕೆ, ಇದ್ದಕ್ಕಿದ್ದಂತೆ ಏಕೋ ನನ್ನಿಂದ ದೂರ ಮ್‌ಔನವಾಗಿ ಕುಳಿತಳು. ಯಾಕೆಂದು ಕೇಳಿದರೆ ಏನೂ ಮಾತನಾಡಲಿಲ್ಲ. ನನ್ನ ಎರಡೂವರೆ ವರ್ಷಗಳ ಪ್ರೀತಿಯಲ್ಲಿ ಇದೇ ಮೊದಲ ಬಾರಿಗೆ ಆಕೆ ಈ ರೀತಿ ನನ್ನಿಂದ ದೂರ ಹೋಗಿ ಕುಳಿತಿದ್ದು. ನಿರಾತಂಕವಾಗಿ ಸಾಗಿದ್ದ ನನ್ನ ಪ್ರೀತಿಗೆ ಇದ್ದಕ್ಕಿದ್ದಂತೆ ಯಾರ ಶಾಪ ಬಿತ್ತೋ ಏನೋ...
 
ಮ್‌ಔನವಾಗಿ ಕುಳಿತಿದ್ದ ಆಕೆಯ ಬಳಿ ಹೋಗಿ ಏನೆಂದು ಕೇಳಿದಾಗ ಆಕೆ ಮಾತಿಗಳಿದಳು. ನನ್ನನ್ನು ಎಂದೂ ಹೆಸರಿಡಿದು ಕರೆಯದ ಆಕೆ ಅಂದು ಹೆಸರಿಡಿದು ಸಂಭೋಧಿಸಿದ್ದಳು. ನಿಜಕ್ಕೂ ನನಗೆ ವಿಚಿತ್ರವೆನಿಸಿದರೂ ಆಕೆಯ ವರ್ತನೆ ನನಗೇ ಶಾಕ್ ನೀಡಿತ್ತು. ಮುಂದುವರಿದು ಇನ್ನು ಮುಂದೆ ನಾನು ನೀನು ಸ್ನೇಹಿತರಾಗಿ ಮುಂದುವರೆಯೋಣ, ನನಗೆ ಪ್ರೀತಿ ಎಂದರೆ ಇಷ್ಟವಿಲ್ಲ. ನಾನು ನಿನಗೆ ತಕ್ಕಳಾದವಳಲ್ಲ, ನೀನು ಬೇರೆಯವರನ್ನು ಮದುವೆಯಾಗು, ನೀನು ಜೀವನದಲ್ಲಿ ಚೆನ್ನಾಗಿರುವುದೇ ನನಗಿಷ್ಟ ಎಂತೆಲ್ಲಾ ಬಡಬಡಿಸಿದಾಗ ನನಗಂತೂ ಆಕಾಶವೇ ಕಳಚಿ ತಲೆಯ ಮೇಲೇ ಬಿದ್ದಂತಾಯ್ತು.
 
ಒಂದು ಕ್ಷಣ ನಾನೆಲ್ಲಿದ್ದೇನೆ ಎಂಬುದೇ ನನಗೆ ಗೊತ್ತಾಗಲಿಲ್ಲ. ನಾನೇನು ಕನಸು ಕಾಣುತ್ತಿರಬೇಕು ಎಂದುಕೊಂಡರೆ ಅದು ಕನಸಲ್ಲ, ಕಟುಸತ್ಯವಾಗಿತ್ತು. ಎರಡೂವರೆ ವರ್ಷಗಳಿಂದ ನನ್ನ ಪ್ರಾಣಕ್ಕೆ ಪ್ರಾಣವಾಗಿದ್ದ ಆಕೆ ಇಂದೇಕೆ ಹೀಗೇಳುತ್ತಿದ್ದಾಳೆ ಎಂಬುದೇ ನನಗೆ ತಿಳಿಯದೆ ಹೋಯಿತು. ನಾನೇಕೆ ಇನ್ನೂ ಭೂಮಿಯ ಮೇಲೆ ಇದ್ದೇನೆ ಎಂಬ ಭಾವನೆ.ಬೆಟ್ಟದ ಮೇಲಿಂದ ಕೆಳಗೆ ಹಾರಲೇ ಎನಿಸಿತು. ಆಕೆ ತಮಾಷೆಗೆ ಹೀಗೆ ಮಾತನಾಡುತ್ತಿದ್ದಾಳೆ ಎಂದು ನಾನಂದುಕೊಂಡರೂ, ಆಕೆಯದು ತಮಾಷೆ ಅಲ್ಲ ಎಂದು ನನಗೆ ನಂತರವೇ ತಿಳಿದದ್ದು. ಹಿಂದಿನ ರಾತ್ರಿ ನಾನು ಅಂದುಕೊಂಡಿದ್ದೆಲ್ಲಾ ಒಂದೊಂದಾಗಿ ಕಳಚಿಕೊಳ್ಳತೊಡಗಿತು. ನನಗೆ ಮಾತೇ ಹೊರಡದಾಯಿತು. ಏನು ಮಾತನಾಡುವುದು?
 
ಏನೋ ಅವಳ ಮನಸ್ಥಿತಿ ಸರಿಯಿಲ್ಲವೇನೋ ಎಂದು ನಾನೂ ಸಹ ಸ್ವಲ್ಪ ಸಮಯ ಅವಳನ್ನು ಮಾತನಾಡಿಸದೆ ಸುಮ್ಮನೆ ಬಿಟ್ಟೆ. ಆದರೂ ಅವಳ ಮನಸ್ಸು ಬದಲಾಗಲಿಲ್ಲ. ಆಕೆ ಎಲ್ಲಾ ಆಲೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದಳು. ನನ್ನ ಆಕೆಯ ಪ್ರೇಮಾನುಬಂಧ ಅಂದಿಗೆ ಕೊನೆಯಾಗಿತ್ತು. ಏನು ಹೇಳಿದರು ಆಕೆ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.
 
ಈ ಘಟನೆ ನಡೆದು ಸುಮಾರು ೨ ವರ್ಷಗಳೇ ಕಳೆದುಹೋದವು. ಅಂದಿನಿಂದ ಇಂದಿನವರೆಗೂ ನಾನು ಆಕೆಯನ್ನು ಕಾರಣ ಕೇಳಿಲ್ಲ. ಹೇಳುವ ಮನಸ್ಸೂ ಅವಳಿಗಿಲ್ಲ. ಈ ಹುಡುಗಿಯರು ಯಾವಾಗ ಪ್ರೀತಿ ಮಾಡ್ತಾರೋ, ಯಾವಾಗ ಬೇಡ ಅಂತಾರೋ ಒಂದೂ ತಿಳಿಯುವುದಿಲ್ಲ. ಹಾಗೆಯೇ ಅವರ ಆಟಗಳಿಗೆ ಬಲಿಯಾದ ನನ್ನಂಥಹವರು ಕಡಿಮೆ ಏನೂ ಇಲ್ಲ.

(ಇದು ನನ್ನ ಸ್ನೇಹಿತನೊಬ್ಬನ ಪ್ರೇಮ ಪ್ರಸಂಗದ ಕೊನೆಯ ಭಾಗ)

6 comments:

  1. ನಮಸ್ಕಾರ ತಿಲಕ್ ಸರ್,

    ನಿಮ್ಮ ಬರಹ ಮನಕಲಕುವಂತಿದೆ..
    ನಿಮ್ಮ ಬರಹದಲ್ಲಿನ ಗೆಳೆಯ ತುಂಬಾ ಕಾಡಿದರು...

    ReplyDelete
  2. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸಾರ್‍.

    ReplyDelete
  3. ತಿಲಕ್ ನಿಮ್ಮ ಗೂಡಿನ ಬಗ್ಗೆ ಜ್ಞಾನಮೂರ್ತಿಯಲ್ಲಿ ಲಿಂಕು ಸಿಕ್ತು...
    ಗ್ರಾಮೀಣ ಸೊಗಡಿಗೆ ನನ್ನದೂ ದನಿ..ನಾನೂ ಅದೇ ಪಂಕ್ತಿಯವ..
    ಚಿಂತನೆಯನ್ನು ನವಿರಾಗಿ ಓದಿಸಿಕೊಂಡು ಹೋಗುವಂತೆ ಬರೆದಿದ್ದೀರಿ...
    ನಮ್ಮಲ್ಲೂ ಬನ್ನಿ, ಪ್ರತಿಕ್ರಿಯಿಸಿ...ಶುಭವಾಗಲಿ

    ReplyDelete
  4. ..ಹೌದು ಗುರುವೇ ಹೀಗೇನೆ...
    ಕೆಲವು ಹುಡುಗಿಯರು ಹುಡುಗರ ಒಡಲಲ್ಲಿ ಕವಿತೆ ಬರೆಯದಿದ್ದರೂ ಒಲವಿನ ಹಣತೆ ಹುರಿಸುತ್ತಾರೆ....

    ಧನ್ಯವಾದಗಳು .
    ಗುರುಪ್ರಸಾದ್ ಗೌಡ.

    ReplyDelete
  5. ನಮಸ್ಕಾರ ಗೌಡ್ರೆ
    ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  6. ತಿಲಕ್, ಏನು..?? ಮುಂದಕ್ಕೆ ಪ್ರೋಗ್ರೆಸ್ ಇದೆಯಾ ಅಥ್ವಮನಸ್ಸಿನಲ್ಲಿ ಮಂಡಿಗೇನಾ..?!! ಚನ್ನಾಗಿದೆ ನಿಮ್ಮ ಸ್ನೇಹಿತನ ಕಥನ (ನಿಮ್ಮದೇ ಆದ್ರೂ ಚಿಂತೆಯಿಲ್ಲ...ಒಪ್ಪೊಕೊಳ್ಳಿ...).

    ReplyDelete