Thursday, February 5, 2009

ಪ್ರೀತಿ ಅಂದ್ರೆ ಇದೇನಾ...?


ಪ್ರೀತಿ-ಪ್ರೇಮ ಎಂದು ಆರಂಭಗೊಂಡು ೨ ವರ್ಷ ಕಳೆಯುವುದರೊಳಗೆ ವಿಚ್ಚೇದನ ಪಡೆಯುವ ಮಂದಿ ಇರುವ ಈ ಕಾಲದಲ್ಲಿ, ಪತಿಯ ನೆನಪಿಗೋಸ್ಕರ ೬೦ ವರ್ಷಗಳಿಂದ ಹಿಡಿದ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರೆ ಬಹುಷಃ ನಂಬಲಿಕ್ಕಾಗದಿದ್ದರೂ ಇದು ಸತ್ಯ.
ಯಾರಪ್ಪ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದೀರಾ...? ನೂರತ್ತರ ಹರೆಯದಲ್ಲೂ ಬತ್ತದ ಸ್ವಾಭಿಮಾನಿ ವೃದ್ದೆಯೊಬ್ಬರ ಪ್ರೇಮದ ಕಥನ ಇದು!
ಪತಿ ಊರ ಮುಂಭಾಗದಲ್ಲಿರುವ ಒಂದು ಕಟ್ಟೆಯ ಮೇಲೆ ಕುಳಿತಿರುತ್ತಿದ್ದರು, ಯಾವಾಗಲೂ ಅಲ್ಲೇ ಓಡಾಡುತ್ತಿದ್ದರು ಎಂಬ ಕಾರಣಕ್ಕಾಗಿ ಪತಿ ಗತಿಸಿದ ನಂತರ ಅವರ ನೆನಪಿಗಾಗಿ ೬೦ ವರ್ಷಗಳಿಂದ ಅವರು ಕುಳಿತುಕೊಳ್ಳುತ್ತಿದ್ದ, ನಡೆದಾಡುತ್ತಿದ್ದ ಜಾಗವನ್ನು ಪ್ರತಿದಿನ ಸ್ವಚ್ಚವಾಗಿಡುವುದೇ ಈಕೆಯ ಕಾಯಕ!ಈಕೆ ಮಾದಮ್ಮ, ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಹಳ್ಳಿ ಎಂಬ ಗ್ರಾಮದವರು.

ಎಲ್ಲರಿಗೂ ಮಾದರಿಯಾಗುವ ವ್ಯಕ್ತಿತ್ವ, ವಯಸ್ಸು ೧೧೦ರಿಂದ ೧೧೫ ಇರಬಹುದು. ಪತಿ ತಿಮ್ಮಯ್ಯ ಮರಣಹೊಂದಿ ೬೦ ವರ್ಷಗಳು ಕಳೆದಿವೆ. ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಇದ್ದಾರೆ.

ಹುಟ್ಟು ಸ್ವಾಭಿಮಾನಿಯಾದ ಈಕೆ, ಇದುವರೆಗೂ ಯಾರಿಂದಲೂ ತನ್ನ ಕೆಲಸವನ್ನು ಮಾಡಿಸಿಕೊಂಡಿಲ್ಲ. ಇದರಲ್ಲೇನು ವಿಶೇಷ ಎಂದೀರಾ? ಕೇವಲ ಪತಿಯ ಮೇಲಿನ ಪ್ರೀತಿಗೋಸ್ಕರ ಈಕೆ ತನ್ನ ಕಾಯಕವನ್ನು ಪ್ರತಿದಿನ ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.

ಪ್ರತಿದಿನ ಈ ಕೆಲಸ ಮಾಡದೇ ಇದ್ದರೆ ಈಕೆಗೆ ಗಂಟಲಲ್ಲಿ ನೀರೂ ಇಳಿಯುವುದಿಲ್ಲ! ಗಂಡ ಕುಳಿತುಕೊಳ್ಳುವಾಗ ಸ್ವಚ್ಚವಾಗಿರಲಿ ಎಂದು ಆರಂಭಗೊಂಡ ಈ ಕಾಯಕ ಗಂಡನ ಮರಣಾನಂತರವೂ ಮುಂದುವರೆಸುತ್ತಿದ್ದೇನೆ ಎನ್ನುತ್ತಾರೆ ಈ ಅಜ್ಜಿ!ಈ ಕಾಯಕವನ್ನು ಮಾಡಲು ಬೇರೆಯವರಿಗೆ ಅವಕಾಶ ನೀಡದ ಈ ಅಜ್ಜಿ, ಸ್ವಚ್ಚ ಮಾಡಲು ಉಪಯೋಗಿಸುವ ಪೊರಕೆಯನ್ನೂ ಸಹ ಬೇರೆಯವರಿಂದ ಪಡೆಯುವುದಿಲ್ಲವಂತೆ!

ಮನೆಯಲ್ಲಿ ನೋಡಿಕೊಳ್ಳುವವರು ಎಲ್ಲಾ ಇದ್ದರೂ, ತನ್ನ ದಿನನಿತ್ಯದ ಕಾಯಕವನ್ನು ತಾನೇ ಮಾಡಿಕೊಳ್ಳುವ ಈಕೆಯ ಉತ್ಸಾಹ ಇನ್ನೂ ಬತ್ತಿಲ್ಲ. ಜನಗಳ ಪ್ರೀತಿಗೆ ಪಾತ್ರವಾಗಿರುವ ಈಕೆಯನ್ನು, ಪಕ್ಕದ ಗ್ರಾಮದ ಜನರೂ ಎಲ್ಲರ ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ.

ಇನ್ನೊಂದು ವಿಶೇಷವೇನೆಂದರೆ ಪರರ ಹಣ ಈಕೆಗೆ ಪಾಶಕ್ಕೆ ಸಮ! ತನ್ನ ಕಣ್ಣೆದುರಿಗೇ ದುಡ್ಡು ಬಿದ್ದಿದ್ದರೂ ಈಕೆ ತೆಗೆದುಕೊಳ್ಳುವುದಿಲ್ಲ!ಬೇಕೆಂದು ಕೆಲವರು ಈಕೆಯ ಮುಂದೆ ದುಡ್ಡು ಇಟ್ಟರೂ ಈಕೆ ಕಣ್ಣೆತ್ತಿಯೂ ಸಹ ಅದನ್ನು ನೋಡುವುದಿಲ್ಲವಂತೆ. ಇಂಥಹವರೂ ಇದ್ದಾರೆಯೇ!

೧೧೦ ವರ್ಷಗಳಾದರೂ ಈಕೆ ಇದುವರೆಗೂ ಯಾವ ಖಾಯಿಲೆಯಿಂದಲೂ ಬಳಲಿಲ್ಲ ಎಂದರೆ ನಂಬುತ್ತೀರಾ? ಸರಳ ಜೀವನ, ಮಿತ ಆಹಾರ, ಆರೋಗ್ಯಕರ ಜೀವನ ಈಕೆಯ ದೀರ್ಘಾಯಸ್ಸಿನ ಗುಟ್ಟು!ಒಂಟಿ ಜೀವನ ನಡೆಸುತ್ತಿರುವ ಈಕೆಯ ಬದುಕು ಅಂತ್ಯಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಆದರೂ ಈಕೆಗೆ ತನ್ನ ಗಂಡನ ಮೇಲಿನ ಪ್ರೀತಿ ಬತ್ತಿಲ್ಲ ಎಂದು ಕಾಣುತ್ತಿದೆ.

ಪ್ರೀತಿ ಅಂದ್ರೆ ಇದೇನಾ....?

1 comment: