Thursday, February 5, 2009

ಆಟ ಮುಗಿಸಿದ 'ಕೆರೆಮನೆ’




ಯಕ್ಷಗಾನ ರಂಗದ ಸುಖ-ದುಃಖ ಮತ್ತು ಏರಿಳಿತಗಳನ್ನು ಬಾಲ್ಯದಿಂದಲೇ ಅನುಭವಿಸಿಕೊಂಡು, ಪೋಷಿಸಿಕೊಂಡು ಬಂದ ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡಮಿ ಅಧ್ಯಕ್ಷರೂ ಆದ ಕೆರೆಮನೆ ಶಂಭುಹೆಗ್ಗಡೆ ಎಂಬ ಮಹಾನ್ ಚೇತನ ಇನ್ನು ಇತಿಹಾಸದ ಪುಟಗಳಲ್ಲಿ ಮಾತ್ರ!

ಕೇರಳದಲ್ಲಿ ಕಥಕ್ಕಳಿ ನಾಡಿನ ಸಾಂಸ್ಕೃತಿಕ ರಂಗದ ಮಾನ್ಯತೆ ಪಡೆದಿದೆಯೋ ಹಾಗೆಯೇ ಯಕ್ಷಗಾನ ಕರ್ನಾಟಕದಲ್ಲಿ ಅಗ್ರಪಂಕ್ತಿಯ ಕಲೆಯಾಗಿ ಮಾನ್ಯತೆ ಪಡೆಯಬೇಕಾದ ಅಗತ್ಯವಿದೆ ಎಂಬ ತಮ್ಮ ಮಹದಾಸೆಯನ್ನು ಇಟ್ಟುಕೊಂಡಿದ್ದ ಹೆಗಡೆಯವರು, ಅನುಷ್ಟಾನಕ್ಕಾಗಿ ಬಹಳಷ್ಟು ಶ್ರಮಿಸಿದರೂ ಕಡೆಗೂ ಅವರ ಆಸೆ ಈಡೇರಲಿಲ್ಲ.

ಔದ್ಯೋಗಿಕತೆಗೆ ಸಿಕ್ಕಿ ಜಾನಪದ ಕಲಾಪ್ರಕಾರಗಳು ನಾಶವಾಗುತ್ತಿದ್ದು, ಜಾನಪದ ಕಲಾಪ್ರಕಾರಗಳನ್ನು ಉಳಿಸುವ ಕೆಲಸವನ್ನು ಕಲಾವಿದರು, ಪ್ರೇಕ್ಷಕರು ಮಾಡಬೇಕು. ಯಕ್ಷಗಾನ ಕ್ಷೇತ್ರಕ್ಕೆ ತಮ್ಮಿಂದ ಒಳ್ಳೆಯದಾಗಿದೆಯೋ ಇಲ್ಲವೋ, ಕೆಟ್ಟದಂತೂ ಆಗಬಾರದು ಎನ್ನುವ ಕಳಿಕಳಿ ಹೊಂದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಹಾಗೂ ರಂಗಭೂಮಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತಿದ್ದರು.

ಯಕ್ಷಗಾನ ಕಲೆ, ಪೋಷಣೆ ಹಾಗೂ ಅಭಿವೃದ್ದಿಗೆ ಆದ್ಯತೆ ನೀಡಲು ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾಗಬೇಕೆನ್ನುತ್ತಿದ್ದ ಅವರು, ಜಾನಪದ ಕ್ಷೇತ್ರವು ಅತ್ಯಂತ ವಿಸ್ತಾರವಾಗಿರುವುದರಿಂದ ಒಂದೇ ಅಕಾಡೆಮಿಯಿಂದ ಎರಡು ಸಂಗತಿಗಳಿಗೂ ನ್ಯಾಯ ಸಿಗಲಾರದು ಎಂಬ ಅಭಿಪ್ರಾಯ ಹೊಂದಿದ್ದರು.

ಯಕ್ಷಗಾನ ಕಲಾಕೇಂದ್ರ ಸ್ಥಾಪಿಸಿ, ಸಂಚಾರಿ ಮೇಳ ರೂಪಿಸಿ ಕಲೆಯ ಋಣ ತೀರಿಸುತ್ತಾ, ರಕ್ಷಣೆಯ ಕೆಲಸವನ್ನು ಮಾಡಿಕೊಂಡು ಬಂದಿದ್ದ ಕೆರೆಮನೆ ಶಂಭುಹೆಗ್ಗಡೆಯವರು, ತಮ್ಮ ಪುತ್ರ ಶಿವಾನಂದ ಹೆಗಡೆಯವರನ್ನು ಸಹ ಈ ಕ್ಷೇತ್ರಕ್ಕೆ ಕರೆತಂದು, ತಮ್ಮ ಮುಂದಿನ ಪೀಳಿಗೆಯೂ ಸಹ ಯಕ್ಷಗಾನ ಕಲೆಯನ್ನು ಮುಂದುವರಿಸುವ ಜವಾಬ್ದಾರಿಯನ್ನು ಹೊರಿಸಿದ್ದಾರೆ.

ತಮ್ಮ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಎಲ್ಲರನ್ನೂ ಕಲಾವಿರನ್ನಾಗಿ ರೂಪಿಸಿದ ಶಂಭುಹೆಗ್ಗಡೆಯವರು, ತಮ್ಮ ಇಳಿ ವಯಸ್ಸಿನಲ್ಲೂ ತಮ್ಮ ಕಲಾ ಪ್ರೇಮ ಬಿಟ್ಟಿರಲಿಲ್ಲ.

ಒಂದು ಕಾಲದಲ್ಲಿ ಅನಕ್ಷರಸ್ತ ಸಮುದಾಯವನ್ನು ಕಲೆಯ ಮೂಲಕ ಪೌರಾಣಿಕ ಕಥೆಗಳನ್ನು ತಲುಪಿಸಿದ ಸಾಧನೆಯನ್ನು ಯಕ್ಷಗಾನ ಕಲಾವಿದರು ಮಾಡಿದ್ದಾರೆ. ಯಕ್ಷಗಾನದಲ್ಲಿ ಮಾತು, ಅಭಿನಯಕ್ಕೆ ಪ್ರಾಮುಖ್ಯತೆ ಇದೆ. ಇಲ್ಲಿ ಒಂದು ಪಾತ್ರಕ್ಕೆ ವೈಚಾರಿಕ ನೆಲೆಗಟ್ಟನ್ನು ಒದಗಿಸಿಕೊಟ್ಟವರು ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಕಲಾವಿದರು, ಅವರ ಪ್ರಭಾವ ಉಳಿದ ವೇಷಧಾರಿಗಳ ಮೇಲೂ ಇದೆ ಎಂದು ಹೆಗಡೆ ಅಭಿಪ್ರಾಯಿಸುತ್ತಿದ್ದರು.

ಜಾನಪದ ಕಲೆ ಹಾಗೂ ಸಾಹಿತ್ಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪದವಿ ಮಟ್ಟದ ಪಠ್ಯದಲ್ಲೂ ಈ ವಿಷಯವನ್ನು ಸೇರ್ಪಡೆ ಮಾಡಬೇಕು ಎಂದು ಸರ್ಕಾರಕ್ಕೂ ಸಲಹೆ ಮಾಡಿದ್ದರು.ಅಗಲಿದ ಈ ಮಹಾನ್ ಚೇತನಕ್ಕೆ ಅನೇಕ ಪುರಸ್ಕಾರಗಳು, ಪ್ರಶಸ್ತಿಗಳು ಸಂದಿದ್ದು, ಸನ್ಮಾನಗಳಿಗಂತೂ ಲೆಕ್ಕವೇ ಇರಲಿಲ್ಲ.

ಯಕ್ಷಗಾನದಲ್ಲಿ ಆಸಕ್ತಿ ಇರುವ ಕಲಾವಿದರಿಗಾಗಿ ಜಿ.ಎಸ್. ಭಟ್ ಅವರು ಕೆರೆಮನೆ ಶಂಭುಹೆಗ್ಗಡೆ ಅಧ್ಯಯನ ಗ್ರಂಥವನ್ನೂ ಸಹ ರಚಿಸಿದ್ದಾರೆ. ಇದರಲ್ಲಿ ಹೆಗ್ಡೆಯವರ ಯಕ್ಷಗಾನ ಲೋಕದ ಸಾಧನೆಯನ್ನು ಬಣ್ಣಿಸಲಾಗಿದೆ.

ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಇದನ್ನು ಮಹತ್ವದ ಕಲಾ ಪರಂಪರೆ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆಟ ನೋಡುವುದಿಲ್ಲ ಏಕೆ? ಎನ್ನುತ್ತಿದ್ದ ಹೆಗಡೆಯವರು, ಯಕ್ಷಗಾನ ಕಲಾಪ್ರಕಾರಕ್ಕೆ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದರು.

ಒಟ್ಟಾರೆ ಒಬ್ಬ ಮಹಾನ್ ಯಕ್ಷಗಾನ, ರಂಗಭೂಮಿ ಕಲಾವಿದರೊಬ್ಬರನ್ನು ನಮ್ಮ ಸಾಂಸ್ಕೃತಿಕ ನಾಡು ಕಳೆದುಕೊಂಡಿದೆ. ಇದನ್ನು ಉಳಿಸಲು, ಬೆಳೆಸಲು ಮತ್ತೊಬ್ಬ ಶಂಭುಹೆಗ್ಗಡೆ ಹುಟ್ಟಿ ಬರುವರೇ? ಕಾದುನೋಡಬೇಕಾಗಿದೆ.

ಅಗಲಿದ ಚೇತನಕ್ಕೆ ನಮನ ಸಲ್ಲಿಸುತ್ತಾ, ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.

No comments:

Post a Comment